ಸುದ್ದಿ ಕನ್ನಡ ವಾರ್ತೆ
ಗೋಕರ್ಣ: ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಸೀಮೋಲ್ಲಂಘನ ಮಾಡುವ ಮೂಲಕ ಚಾತುರ್ಮಾಸ್ಯ ವ್ರತವನ್ನು ಸಂಪನ್ನಗೊಳಿಸಿದರು.
ಗಂಗಾವಳಿ ನದಿಗೆ ಫಲ ಸಮರ್ಪಿಸಿ, ತೊಕೆಯ ಕೆಂಗಾಲ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಭಕ್ತರನ್ನು ಆಶೀರ್ವದಿಸಿದರು. ಪ್ರದೀಪ ನಾಯ್ಕ ದೇವರಬಾವಿ, ಮಹೇಶ ಶೆಟ್ಟಿ, ವೆಂಕಟರಮಣ ಕೋರಿ, ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಶ್ರೀರಾಮಚಂದ್ರಾಪುರ ಮಠಕ್ಕೆ ಪರಂಪರೆಯಾಗಿ ನಡೆದುಕೊಳ್ಳುವ ಭಕ್ತ ಸಮಾಜದವರೆಲ್ಲರೂ ಚಾತುರ್ಮಾಸ್ಯದಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಿಸಿದರು. 23 ವಿವಿಧ ಸಮಾಜಗಳು ಸ್ವರ್ಣಪಾದುಕಾ ಪೂಜೆಯನ್ನು ಸಮರ್ಪಿಸಿ, ತಮ್ಮ ಪರಂಪರಾಗತ ಗುರು ಭಕ್ತಿಯನ್ನು ವ್ಯಕ್ತಪಡಿಸಿದರು.
ಆಹಾರದ ಕುರಿತು ಪೀಠಾಧಿಪತಿಗಳೊಬ್ಬರು ಸವಿಸ್ತಾರವಾಗಿ ಸಮಾಜಕ್ಕೆ ಪ್ರವಚನದ ಮೂಲಕ ಮಾರ್ಗದರ್ಶನ ಮಾಡಿದ್ದು ಇದೇ ಮೊದಲಾಗಿದ್ದು, ಇಂದಿನ ಕಾಲಕ್ಕೆ ಅತ್ಯಗತ್ಯವಾದ ವಿಚಾರವನ್ನು ಶ್ರೀಗಳು ಚಾತುರ್ಮಾಸ್ಯದ 60 ದಿನಗಳ ಕಾಲ ಪ್ರವಚನದ ಮೂಲಕ ಆಹಾರದ ಸರಿ ತಪ್ಪುಗಳನ್ನು ತಿಳಿಸಿದರು. ಹಾಗೆಯೇ 60 ದಿನಗಳು ಕರಾವಳಿ, ಮಲೆನಾಡು ಭಾಗದ ಪಾರಂಪರಿಕ ಆಹಾರ ಪದಾರ್ಥಗಳು ಚಾತುರ್ಮಾಸ್ಯದ ವಿಶೇಷವಾಗಿತ್ತು.
