ಸುದ್ದಿ ಕನ್ನಡ ವಾರ್ತೆ
ಹುಬ್ಬಳ್ಳಿ : ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಪ್ರಯಾಣಿಸುತ್ತಿದ್ದ ಕಾರು ತಡಸ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಸ್ವಾಮೀಜಿಗಳ ಭುಜಕ್ಕೆ ಗಾಯವಾಗಿದ್ದು, ಚಾಲಕ ಸೇರಿ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿದ್ಯಾನಗರದ ಶುಸ್ರುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ.ಶ್ರೀನಿವಾಸ ಜೋಶಿ, ಉತ್ತರಾದಿಮಠದ ಆಡಳಿತಾಧಿಕಾರಿಗಳು ಶ್ರೀಗಳ ಚಿಕಿತ್ಸಾ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ.
ಶ್ರೀಗಳ ಕಾರು ಅಪಘಾತವಾಗಿ ಶ್ರೀಗಳು ಗಾಯಗೊಂಡ ವಿಷಯ ತಿಳಿದು ನೂರಾರು ಭಕ್ತರು ಆಸ್ಪತ್ರೆ ಬಳಿ ಬಂದಿದ್ದು, ಶ್ರೀಮಠದ ಆಡಳಿತಾಧಿಕಾರಿಗಳು, ಶ್ರೀಗಳು ಆರಾಮಾಗಿದ್ದಾರೆ. ಯಾವುದೇ ಅಪಾಯವಿಲ್ಲ. ಆತಂಕ ಪಡಬೇಕಿಲ್ಲ ಎಂದು ಹೇಳಿ ಭಕ್ತರನ್ನು ಸಮಾಧಾನ ಪಡಿಸಿ ವಾಪಸ್ ಕಳಿಸುತ್ತಿದ್ದಾರೆ.
ಶ್ರೀಗಳು ಆರೋಗ್ಯವಾಗಿದ್ದಾರೆ. ಭುಜಕ್ಕೆ ಸ್ವಲ್ಪ ಪೆಟ್ಟಾಗಿದೆ. ಆತಂಕಿತರಾಗಿ ಭಕ್ತರು ಆಸ್ಪತ್ರೆ ಕಡೆಗೆ ಬರಬಾರದು ಎಂದು ಶ್ರೀಮಠದ ಆಡಳಿತಾಧಿಕಾರಿ ಮನವಿ ಮಾಡಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?
ಭಾನುವಾರ ಸಂಜೆ ಧಾರವಾಡದಲ್ಲಿ ಚಾತುರ್ಮಾಸ್ಯ ಮುಗಿಸಿ ಸಿಮೋಲ್ಲಂಘನ ಮಾಡಿದ ಬಳಿಕ ಎಂ.ಕೆ ಹುಬ್ಬಳ್ಳಿಗೆ ತೆರಳಿ ನರಸಿಂಹ ದೇವರಿಗೆ ಶ್ರೀಗಳು ಪೂಜೆ ಸಲ್ಲಿಸಿದ್ದರು. ಬಳಿಕ ಹಾವೇರಿ ಜಿಲ್ಲೆ ಸವಣೂರಿಗೆ ತೆರಳುವಾಗ ತಡಸ ಸಮೀಪ ಹೆದ್ದಾರಿಯಲ್ಲಿ ಶ್ವಾನ ಕಾರಿಗೆ ಅಡ್ಡ ಬಂದಿದೆ. ಶ್ವಾನ ಬದುಕಿಸಲು ಚಾಲಕ ಕಾರು ತಿರುಗಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಶ್ರೀಗಳ ಅಪ್ತ ಮೂಲಗಳು ತಿಳಿಸಿವೆ.
