ಸುದ್ದಿ ಕನ್ನಡ
ಶಿರಸಿ: ದೇವರು, ಮಾತೃ–ಪಿತೃ, ಗುರುಗಳು, ಇತರ ಜೀವಿಗಳು ಹಾಗೂ ಸಹಮನುಷ್ಯರಿಗೆ ಸಲ್ಲಿಸಬೇಕಾದ ಋಣವನ್ನು ತೀರಿಸುವುದು ಹಿಂದೂ ಧರ್ಮದ ವಿಶಿಷ್ಟ ಪರಂಪರೆ. ಈ ಪಂಚ ಮಹಾ ಋಣ ತೀರಿಸುವವರೇ ಹಿಂದೂಗಳು ಎಂದು ಶ್ರೀಕ್ಷೇತ್ರ ಸಿದ್ದಗಿರಿ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ಶುಕ್ರವಾರ ಇಲ್ಲಿನ ರಾಘವೇಂದ್ರ ಮಠದಲ್ಲಿ ಮೂರು ದಿನಗಳ ಕಾಲ ನಡೆದ ವಿಷ್ಣು ಮಹಾಯಾಗದ ಮಹಾಮಂಗಲ ಹಾಗೂ ಹಿಂದೂ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಓಂಕಾರ ಮಹಾಮಂತ್ರದಲ್ಲಿ ನಂಬಿಕೆ ಇಡುವವರು, ಗೋವನ್ನು ಪ್ರೀತಿಸುವವರು, ಕರ್ಮಸಿದ್ಧಾಂತ ಹಾಗೂ ಪೂರ್ವಜನ್ಮ, ಸ್ವರ್ಗ–ನರಕದ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳುವವರನ್ನು ಹಿಂದೂಗಳೆಂದು ಗುರುತಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಯಾವುದೇ ಕಾರ್ಯ ಮಾಡಿದರೂ ಅದು ಒಳಿತಿಗಾಗಿ ಇರಬೇಕು ಎಂಬ ಆಶಯವಿದೆ. ಹಸು ನಮಗೆ ಕೇವಲ ಪ್ರಾಣಿಯಲ್ಲ, ತಾಯಿ. ಭಾರತೀಯ ಸಂಸ್ಕೃತಿಯ ಕೇಂದ್ರ ಸ್ಥಾನದಲ್ಲಿ ಗೋವು ಇದೆ. ಗೋವಿನ ಮಹತ್ವ ಹಾಗೂ ಅದರ ಉಪಯುಕ್ತತೆ ಅಪಾರ. ಹಸುವಿನ ಕುರಿತು ಎಂಟು ಪೇಟೆಂಟ್ಗಳಿರುವುದೇ ಅದರ ವೈಶಿಷ್ಟ್ಯಕ್ಕೆ ಸಾಕ್ಷಿ ಎಂದರು.
ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ, ಅತಿ ಹೆಚ್ಚು ಭಾಷೆ, ಜಾತಿ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನೂ ಹೊಂದಿದೆ. ಪೂರ್ವದಿಂದ ಇಂದಿನವರೆಗೂ ಜ್ಞಾನಿಗಳು, ಬುದ್ಧಿವಂತರು ಹಾಗೂ ಪ್ರತಿಭಾವಂತರಿಂದ ತುಂಬಿರುವ ದೇಶವಿದು. ಅನಾಚಾರ, ಭ್ರಷ್ಟಾಚಾರ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೂ ಭಾರತ ಸ್ವಾತಂತ್ರ್ಯಾನಂತರ ಗಣನೀಯ ಪ್ರಗತಿ ಸಾಧಿಸಿದೆ. ಇದಕ್ಕೆ ಪ್ರಮುಖ ಕಾರಣ ವಿವಿಧತೆಯಲ್ಲಿ ಏಕತೆ ಎಂಬ ಭಾರತದ ವಿಶಿಷ್ಟ ಶಕ್ತಿ. ಪ್ರತಿಯೊಬ್ಬ ಭಾರತೀಯನಲ್ಲಿಯೂ ಹನುಮಂತನಷ್ಟೇ ಸಾಮರ್ಥ್ಯವಿದೆ. ಆದರೆ, ಆ ಸಾಮರ್ಥ್ಯದ ಅರಿವಿಲ್ಲದಿರುವುದೇ ಸಮಸ್ಯೆ. ಹನುಮಂತನಿಗೆ ತನ್ನ ಶಕ್ತಿಯ ಅರಿವು ಮೂಡಿಸಿದಂತೆ ಭಾರತೀಯರಿಗೂ ತಮ್ಮೊಳಗಿನ ಸಾಮರ್ಥ್ಯದ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
ಭಾರತದಲ್ಲಿಲ ವ್ ಜಿಹಾದ್ ಪ್ರತೀ ವರ್ಷ ೭ರಿಂದ ೮ ಲಕ್ಷ ಬೆಳಕಿಗೆ ಬರುತ್ತಿದೆ. ನುಸಳುಕೋರರು, ಧರ್ಮ ಮತಾಂತರ ನಡೆಯುತ್ತಿದೆ. ನುಸಳುಕೋರರು ಕೇರಳ, ಆಂಧ್ರ, ಕರ್ನಾಟಕದಲ್ಲಿ ಒಳ ನುಸುಳಿ ಬಂದಿದ್ದಾರೆ. ಹಿಂದುಳಿದ ಮಕ್ಕಳು ಕಾಣೆ ಆಗುತ್ತಿದ್ದಾರೆ. ಏನಾಗ್ತಾರೆ ಈ ಮಕ್ಕಳು ಎಂಬುದು ಅರಿಯಬೇಕು. ಹಿಂದುಗಳು ಜಾಗೃತರಾಗಿರಬೇಕು. ಭೂಮಿ ಕೂಡ ಜಿಹಾದ್ ಆಗುತ್ತಿದೆ ಎಂದು ಆತಂಕಿಸಿದರು.
ಶಿರಳಗಿ ಮಠದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಮಾತನಾಡಿ, ಹಿಂದೂ ಸನಾತನ ಧರ್ಮ ಜಗತ್ತಿನಲ್ಲಿಯೇ ಶ್ರೇಷ್ಠವಾದುದು. ಆದರೆ, ಅದರಲ್ಲಿರುವ ಮೌಲ್ಯಗಳು, ಜ್ಞಾನ ಹಾಗೂ ತತ್ವಗಳ ಬಗ್ಗೆ ನಮಗೇ ಸಾಕಷ್ಟು ಅರಿವಿಲ್ಲ. ಹಿಂದೂ ಧರ್ಮದ ಬಗ್ಗೆ ಆಕ್ಷೇಪಿಸುವವರು ಮೊದಲು ಅದರ ಮೂಲ ಗ್ರಂಥಗಳನ್ನು ಓದಿ ಅಧ್ಯಯನ ಮಾಡಬೇಕು. ಪ್ರಾಮಾಣಿಕವಾಗಿ ಅಧ್ಯಯನ ಮಾಡಿದವರು ಸನಾತನ ಧರ್ಮದ ಶ್ರೇಷ್ಠತೆಯನ್ನು ಅರಿತು ಅದಕ್ಕೆ ಶರಣಾಗಲೇಬೇಕಾಗುತ್ತದೆ ಎಂದರು.
ಮಾತನಾಡುವುದು ಸುಲಭ, ಆದರೆ ಹೇಳಿದಂತೆ ಆಚರಿಸುವುದು ಕಷ್ಟ. ಧರ್ಮದ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಡಿದಂತೆ ನಡೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಕನ್ನೇರಿ ಮಠದ ಶ್ರೀಗಳು ಮೊದಲು ಆಚರಣೆಗೆ ಒತ್ತು ನೀಡಿ, ನಂತರ ಅದರ ಮಹತ್ವವನ್ನು ತಿಳಿಸುತ್ತಾರೆ. ಮಾತಿನಲ್ಲಿ ಹೇಳುವುದಕ್ಕಿಂತ ಬದುಕಿನಲ್ಲಿ ಧರ್ಮವನ್ನು ಅನುಸರಿಸುವುದು ಮುಖ್ಯ ಎಂದರು.
ಕನ್ನೇರಿ ಮಠದ ಆಧ್ಯಾತ್ಮಿಕ ಚಟುವಟಿಕೆಗಳು, ಗೋಶಾಲೆ, ಕೃಷಿ ಹಾಗೂ ಗುರುಕುಲದ ಕಾರ್ಯಗಳನ್ನು ಪ್ರತಿಯೊಬ್ಬರೂ ಗಮನಿಸಬೇಕು. ಒಂದೇ ಎಕರೆ ಭೂಮಿಯಲ್ಲಿ ನೂರಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುವ ಕೃಷಿ ಪ್ರಾತ್ಯಕ್ಷಿಕೆ ಅಲ್ಲಿದೆ. ಇಂತಹ ಪ್ರಯೋಗಗಳನ್ನು ನೋಡಲು ಒಮ್ಮೆಯಾದರೂ ಕನ್ನೇರಿ ಮಠಕ್ಕೆ ಭೇಟಿ ನೀಡಬೇಕು. ತನ್ನದು, ಬೇರೆಯವರದು ಎಂಬ ಭೇದವಿಲ್ಲದ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಈ ಅರಿವನ್ನು ತಲುಪಲು ಸನಾತನ ಧರ್ಮ ಮಾರ್ಗದರ್ಶಕವಾಗಿದೆ. ಗುರಿ ತಲುಪಲು ಶಾಸ್ತ್ರಗಳು ದಾರಿದೀಪಗಳಾಗಿವೆ ಎಂದು ತಿಳಿಸಿದರು.
ಉದ್ಯಮಿ ಡಾ. ಎಚ್.ಎಸ್. ಶೆಟ್ಟಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಹಿಂದೂಗಳಿಗೆ ಕೇವಲ ಜಾಗೃತಿ ಮೂಡಿಸುವುದಕ್ಕಿಂತ ಧರ್ಮಾಚರಣೆಯನ್ನು ರೂಢಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಧರ್ಮದ ಬಗ್ಗೆ ಅವಹೇಳನ ಮಾಡುವವರಿಗೆ ಉತ್ತರವಾಗಿ ಸಂತರ ಮಾರ್ಗದರ್ಶನದಲ್ಲಿ ಧರ್ಮಾಚರಣೆಯನ್ನು ಬೆಳೆಸಬೇಕು. ಇಂತಹ ಸಮಾವೇಶಗಳು ನಿರಂತರವಾಗಿ ನಡೆಯಬೇಕು ಎಂದರು.
ನಮ್ಮಲ್ಲಿನ ಸಾವಯವ ಹಿಂದುತ್ವ ಶುದ್ಧ ತುಪ್ಪವಿದ್ದಂತೆ. ಮೃದು ಹಿಂದುತ್ವದ ಬದಲಾಗಿ ಧಾರ್ಮಿಕ ನಿಷ್ಠೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಯತಿಗಳ ಪಾತ್ರ ಮಹತ್ವದ್ದಾಗಿದೆ. ಸಂತರಿಂದಲೇ ಇಂದು ಧರ್ಮ ಉಳಿದಿದೆ. ತಾವು ಕೂಡ ನಾಸ್ತಿಕತೆಯಿಂದ ಆಸ್ತಿಕತೆಯೆಡೆಗೆ ಬರಲು ಸಂತರ ಮಾರ್ಗದರ್ಶನವೇ ಕಾರಣ ಎಂದು ಸ್ಮರಿಸಿದರು.
ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ತೊಲಗಿಸಿ ಸುಂದರ ಸಮಾಜ ನಿರ್ಮಿಸಬೇಕಿದೆ. ಶಾಲೆಗಳಲ್ಲಿ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು. ಅನಗತ್ಯ ವಿಚಾರಗಳಿಗೆ ಹಣ ವ್ಯಯಿಸುವ ಬದಲು ಸತ್ಕಾರ್ಯಗಳಿಗೆ ವಿನಿಯೋಗಿಸಿದರೆ ಅದು ದೇಶದ ಆರ್ಥಿಕತೆಗೂ ಪೂರಕವಾಗುತ್ತದೆ ಎಂದರು.
ಉತ್ತರ ಕನ್ನಡ ಜಿಲ್ಲೆ ಹಿಂದುತ್ವದ ಭದ್ರ ನೆಲೆಯಾಗಿದ್ದು, ಇಲ್ಲಿನ ಮಠ–ಸಂಸ್ಥಾನಗಳಲ್ಲಿ ಅಪಾರ ಶಕ್ತಿಯಿದೆ. ಹಿಂದುತ್ವದ ವಿಚಾರದಲ್ಲಿ ಅನಂತಕುಮಾರ ಹೆಗಡೆ ಎಂದಿಗೂ ರಾಜಿಯಾಗಿಲ್ಲ ಎಂದು ಶ್ಲಾಘಿಸಿದರು. ಇತ್ತೀಚೆಗೆ ಹಿಂದುತ್ವದ ಹೆಸರಿನಲ್ಲಿ ಜನರಿಗೆ ಮೋಸ ಮಾಡುವ ನಕಲಿ ಹಿಂದೂಗಳು ಹುಟ್ಟಿಕೊಂಡಿದ್ದು, ಇಂತಹವರ ಬಗ್ಗೆ ಸಮಾಜ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಕನ್ನೇರಿ ಮಠದ ಆಚಾರ್ಯ ಪ್ರವೀಣ ಅವಧೂತ ಮಾತನಾಡಿ, ಸನಾತನ ಧರ್ಮವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಕನ್ನೇರಿ ಮಠದ ಗುರೂಜಿಗಳ ಮಾದರಿಯ ಕಾರ್ಯಗಳು ಎಲ್ಲೆಡೆ ವಿಸ್ತಾರಗೊಳ್ಳಬೇಕು ಎಂದರು.
ರಾಘವೇಂದ್ರ ಮಠದ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಕೆ.ವಿ. ಭಟ್ಟ, ನವೀನ ಶೆಟ್ಟಿ, ಅನಿಲ್ ಗಾಂವಕರ್, ಹೇಮಾ ಹೆಬ್ಬಾರ, ಅಕ್ಷಯ ಹೆಗಡೆ, ನಿವೇದಿತಾ ಹೆಬ್ಬಾರ ಮತ್ತಿತರರು ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿದರು. ಇದೇ ವೇಳೆ ರವಿ ಗೌಳಿ, ಸುನೀಲ್ ನಾಯ್ಕ ಮಳಲಗಾಂವ ಅವರನ್ನು ಗೌರವಿಸಲಾಯಿತು.
