ಸುದ್ದಿ ಕನ್ನಡ

ದಾಂಡೇಲಿ: ಭರತನಾಟ್ಯ ಹಾಗೂ ಕಥಕ್ ನೃತ್ಯವು ಕೇವಲ ನೃತ್ಯಕಲೆಯಷ್ಟೇ ಅಲ್ಲ. ಅದೊಂದು ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಭಾವನೆಗಳ ಸುಂದರ ಅಭಿವ್ಯಕ್ತಿಯಾಗಿದೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮಕ್ಕಳಿಗೆ ನಮ್ಮ ಸಾಂಪ್ರದಾಯಿಕ ಕಲೆಗಳ ಪರಿಚಯ ಮಾಡಿಸುವುದು ಅತ್ಯಗತ್ಯವಾಗಿದೆ. ಭರತನಾಟ್ಯ ಅಭ್ಯಾಸದಿಂದ ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆ ಬೆಳೆಯುತ್ತದೆ. ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಕಲಾವಿದರನ್ನಾಗಿ ರೂಪಿಸುವುದು ನನ್ನ ಆಶಯವಾಗಿದೆ. ಈ ಕಲೆಯನ್ನು ಆಸಕ್ತಿಯಿಂದ ಕಲಿತು, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯದಲ್ಲಿ ಸಹ್ಯಾದ್ರಿ ಲಲಿತ ಕಲಾ ಕೇಂದ್ರದೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಭರತನಾಟ್ಯ ಗುರು, ಧಾರವಾಡದ ವಿದೂಷಿ ವಿಜೇತಾ ವೆರ್ಣೇಕರ ಹೇಳಿದರು.

ಅವರು ದಾಂಡೇಲಿಯ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಹ್ಯಾದ್ರಿ ಲಲಿತ ಕಲಾ ಕೇಂದ್ರದಲ್ಲಿ ಭರತನಾಟ್ಯ ಹಾಗೂ ಕಥಕ್ ತರಗತಿಗೆ ಚಾಲನೆ ನೀಡಿ ಮಾತನಾಡಿದರು.

ಸಹ್ಯಾದ್ರಿ ಲಲಿತ ಕಲಾ ಕೇಂದ್ರದವರ ಮನವಿಯ ಮೇರೆಗೆ ಧಾರವಾಡದಿಂದ ವಾರದಲ್ಲಿ ಎರಡು ದಿನ ಆಗಮಿಸಿ ವಿದ್ಯಾರ್ಥಿಗಳಿಗೆ ಭರತನಾಟ್ಯ ಹಾಗೂ ಕಥಕ್ ತರಬೇತಿ ನೀಡುವುದಾಗಿ ತಿಳಿಸಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿವಿಧ ಸಾಂಸ್ಕೃತಿಕ ಕಲೆಗಳ ಅರಿವು ಇರಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಹಾಗೂ ಮುಖ್ಯೋಪಾಧ್ಯಾಯ ನಾರಾಯಣ ನಾಯ್ಕ ಮಾತನಾಡಿ, ಇಂದು ಶಾಲಾ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಕಲೆಗಳ ಅರಿವಿನ ಕೊರತೆ ಹಾಗೇ ವೇದಿಕೆ ಭಯ ಕಂಡುಬರುತ್ತಿದೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸಹ್ಯಾದ್ರಿ ಲಲಿತ ಕಲಾ ಕೇಂದ್ರವು ಕೈಗೊಂಡಿರುವ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.

ಹಿರಿಯ ಸಾಹಿತಿ ಹಾಗೂ ರಂಗಕಲಾವಿದ ಮುರ್ತುಜಾ ಹುಸೇನ, ಆನೆಹೊಸೂರ ಮಾತನಾಡಿ, ಕಳೆದ 18 ವರ್ಷಗಳಿಂದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ಭರತನಾಟ್ಯ, ಸಂಗೀತ, ಚಿತ್ರಕಲೆ, ತಬಲಾ, ಕರಾಟೆ, ಅಬಾಕಸ್ ಸೇರಿದಂತೆ ಮಕ್ಕಳಿಗೆ ಉಪಯುಕ್ತವಾಗುವ ಹಲವು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ತರಬೇತಿಗಳನ್ನು ನೀಡಲಾಗುತ್ತಿದೆ. ಇದು ಸಂಸ್ಥೆಯಲ್ಲಿ ಪರಿಣಿತ ಗುರುಗಳಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ವಸ್ತ್ರ ವಿನ್ಯಾಸಕಿ ರಾಜೇಶ್ವರಿ ನಾಯಕ ಮಾತನಾಡಿ, ವಿದೂಷಿ ವಿಜೇತಾ ವೆರ್ಣೇಕರ ಅವರ ಕುಟುಂಬವೇ ಕಲಾವಿದರ ಕುಟುಂಬವಾಗಿದೆ. ಅಂತಹ ಕಲಾ ಪರಂಪರೆಯ ಹಿನ್ನೆಲೆಯುಳ್ಳ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ ಕಲಾವಿದರು ದಾಂಡೇಲಿಗೆ ಆಗಮಿಸಿ ಭರತನಾಟ್ಯ ತರಬೇತಿ ನೀಡುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ ಎಂದರು.

ಕಲಾವಿದ ಶ್ರೀಮಂತ ಮದರಿ ಮಾತನಾಡಿ ನಮ್ಮ ಕಾಲದಲ್ಲಿ ನಮಗೆ ಹಾಗೂ ನಮ್ಮ ಮಕ್ಕಳಿಗೆ ಇಂತಹ ತರಬೇತಿ ನೀಡುವ ಸಂಸ್ಥೆಗಳ ಅವಕಾಶ ಇರಲಿಲ್ಲ. ಆ ಕೊರಗು ಇತ್ತು. ಇಂದು ಸಹ್ಯಾದ್ರಿ ಲಲಿತ ಕಲಾ ಕೇಂದ್ರವು ಆ ಕೊರತೆಯನ್ನು ನೀಗಿಸುತ್ತಿದೆ. ಧಾರವಾಡದಿಂದ ಭರತನಾಟ್ಯ ಗುರುಗಳು ಆಗಮಿಸಿ ಇಲ್ಲಿ ತರಬೇತಿ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಕಳೆದ 18 ವರ್ಷಗಳಿಂದ ದಾಂಡೇಲಿಯಲ್ಲಿ ವಿದೂಷಿ ವಿಜೇತಾ ವೆರ್ಣೇಕರ ಅವರ ನೇತೃತ್ವದಲ್ಲಿ ಭರತನಾಟ್ಯ ತರಗತಿಯನ್ನೂ ಪುನರಾರಂಭಿಸಲಾಗುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಲಲಿತ ಕಲೆ ಹಾಗೂ ಸಾಂಸ್ಕೃತಿಕ ಕಲೆಗಳನ್ನ ಪರಿಚಯಿಸುವುದೇ ನಮ್ಮ ಉದ್ದೇಶವಾಗಿದೆ ಎಂದರು.

ಮಾನ್ಯತಾ ವಾಸರೆ ಪ್ರಾರ್ಥಿಸಿದರು. ಸುಲಕ್ಷಾ ನಾಯ್ಡು ಸ್ವಾಗತಿಸಿದರು. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಕಿ ಜಲಜಾ ವಾಸರೆ ನಿರೂಪಿಸಿ, ವಂದಿಸಿದರು.