ಸುದ್ದಿ ಕನ್ನಡ ವಾರ್ತೆ
​ಹಳಿಯಾಳ: ತಾಲೂಕಿನ ಶಿವಪುರ ಗ್ರಾಮದ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 17 ಪ್ರಯಾಣಿಕರು ಗಾಯಗೊಂಡಿದ್ದಾರೆ.

​ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಶಿವಪುರದ ಈರಪ್ಪ ಕಿರವಾಡ ಎಂಬುವವರ ಜಮೀನಿನ ಬಳಿ ಅಶೋಕ್ ಲೇಲ್ಯಾಂಡ್ ಸರಕು ವಾಹನವು ಮರಕ್ಕೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಚಾಲಕ ಕಲಾಘಟಗಿಯ ಪ್ರವೀಣ ಬಸವರಾಜ ರುದ್ರಾಕ್ಷಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

​ಅಪಘಾತದಲ್ಲಿ ಗಾಯಗೊಂಡವರಲ್ಲಿ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಮಾದೇವಿ ದೇವಗಪ್ಪನವರ, ಮಲ್ಲವ್ವ ಗುತ್ತಿನವರ, ಮಂಜುಳ ಭಜಂತ್ರಿ, ಲಕ್ಷ್ಮಿ ಮೇತ್ರಿ, ಮಾದೇವಿ ಗಡಿಯಾಳಕರ, ಸುವರ್ಣ ಕಂದಿಡಕರ ಹಾಗೂ ವಾಹನ ಚಾಲಕ ಸೇರಿದಂತೆ ತೀವ್ರವಾಗಿ ಗಾಯಗೊಂಡ ಆರು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ.ಉಳಿದ ಗಾಯಾಳುಗಳಿಗೆ ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ.

​ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ತನಿಖೆ ಮುಂದುವರಿದಿದೆ.