ಸುದ್ದಿ ಕನ್ನಡ ವಾರ್ತೆ
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತೊಮ್ಮೆ ಗಮನ ಸೆಳೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ 12 ಗಂಟೆಗಳ ಅವಧಿಯಲ್ಲಿ ಸುಮಾರು 11 ಲಕ್ಷಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದು, ಅವರ ಖಾತೆಯ ಅನುಯಾಯಿಗಳ ಸಂಖ್ಯೆ 10.1 ಕೋಟಿಯಿಂದ 10.2 ಕೋಟಿಗೆ ಏರಿಕೆಯಾಗಿದೆ.
ಗುರುವಾರ ರಾತ್ರಿ ಪ್ರಧಾನಿ ಮೋದಿ ಅವರು NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದರು. “ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವ ಗಂಭೀರ ಅಪರಾಧ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಅವರು ಹೇಳಿದ್ದರು.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆದ ಬೆನ್ನಲ್ಲೇ ಮೋದಿ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಲಕ್ಷಾಂತರ ಮಂದಿ ಹೊಸದಾಗಿ ಫಾಲೋ ಆಗಿದ್ದಾರೆ. ಡಿಜಿಟಲ್ ವಲಯದಲ್ಲಿ ಈ ಬೆಳವಣಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರಧಾನಿ ಮೋದಿ ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಅಧಿಕಾರದಲ್ಲಿರುವ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ದೇಶಗಳ ಪ್ರಮುಖ ನಾಯಕರಿಗಿಂತಲೂ ಅವರ ಫಾಲೋವರ್ಸ್ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿರುವುದು ವಿಶೇಷವಾಗಿದೆ.
