ಸುದ್ದಿ ಕನ್ನಡ ವಾರ್ತೆ
ಗೋವಾ ಕರ್ನಾಟಕ ಗಡಿಯ ಆನಮೋಡ ಅಬಕಾರಿ ಠಾಣೆಯ ನಿರೀಕ್ಷಕರಿಗೆ ಬ್ಲಾಕ್ ಮೇಲ್ ಮಾಡಿ ಬೆಳಗಾವಿಯ ವ್ಯಕ್ತಿ ಓರ್ವ 10 ಲಕ್ಷ ರೂ ಬೇಡಿಕೆ ಇಟ್ಟ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ರಾಮನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.
ಹಣ ನೀಡದಿದ್ದರೆ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ ಆರೋಪದಡಿ ಬೆಳಗಾವಿ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯ ಮಾರುತಿ ಕೇಳಗೇರಿ ಎಂಬ ವ್ಯಕ್ತಿಯೇ 10 ಲಕ್ಷ ಬೇಡಿಕೆಯಿಟ್ಟ ಆರೋಪಿಯಾಗಿದ್ದಾನೆ.
ಕಳೆದ ಎರಡು ದಿನಗಳ ಹಿಂದಷ್ಟೇ ಈತ ಇದೇ ಚೆಕ್ ಪೋಸ್ಟ್ ಬಳಿ ನಕಲಿ ಮಧ್ಯದೊಂದಿಗೆ ಬಂದು ನಾಟಕವಾಡಿದ್ದ ಎನ್ನಲಾಗಿದೆ. ನಕಲಿ ಮಧ್ಯದೊಂದಿಗೆ ಬಂದು ಈತ ಅಬಕಾರಿ ಅಧಿಕಾರಿಗಳಿಗೆ 200 ಲಂಚ ನೀಡಲು ಬಂದಿದ್ದ. ಆದರೆ ಲಂಚ ಪಡೆಯಲು ಅಬಕಾರಿ ಅಧಿಕಾರಿಗಳು ನಿರಾಕರಿಸಿದ್ದರು. ಈ ಬಾಟಲಿಯಲ್ಲಿ ನೀರಿನ ರೀತಿಯ ಪದಾರ್ಥವಿತ್ತು ಅಷ್ಟೇ ಎನ್ನಲಾಗಿದೆ.
ಇದೀಗ ಮತ್ತೊಂದು ಹೊಸ ನಾಟಕದ ಪಾತ್ರದಲ್ಲಿ ಬಂದಿದ್ದ ಈತ. ಅಬಕಾರಿ ಇಲಾಖೆಯಲ್ಲಿ ನಡೆಯುವ ಅಕ್ರಮಗಳ ಬಗ್ಗೆ ನನ್ನ ಬಳಿ ವಿಡಿಯೋ ಸಮೇತದ ಅಗತ್ಯ ದಾಖಲೆಗಳಿವೆ ಇದನ್ನು ನಾನು ಮೇಲಧಿಕಾರಿಗಳಿಗೆ ದೂರು ನೀಡುವುದನ್ನು ವಾಪಸ್ಸು ಪಡೆಯಲು ತನಗೆ 10 ಲಕ್ಷ ರೂ ನೀಡಬೇಕು ಎಂದು ಈತ ಬೇಡಿಕೆ ಇಟ್ಟ. ಆದರೆ ಇಲ್ಲಿದ್ದ ಅಬಕಾರಿ ಅಧಿಕಾರಿಗಳು ತಾವು ಯಾವುದೇ ತಪ್ಪು ಮಾಡಿಲ್ಲ ಯಾವುದೇ ಹಣ ನೀಡುವುದಿಲ್ಲ ಎಂದು ಕಡಾ ಖಂಡಿತವಾಗಿ ಹೇಳಿದಾಗ ಈತ ತಾನು ಅಂಬೇಡ್ಕರ್ ಸಂಘದ ಅಧ್ಯಕ್ಷನಾಗಿದ್ದು ನಿಮ್ಮ ಮೇಲೆ ಜಾತಿನಿಂದಲೇ ಕೇಸ್ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.
ಆದರೆ ಏನೇ ಮಾಡಿದರೂ ಕೂಡ ಅಬಕಾರಿ ಅಧಿಕಾರಿಗಳು ಜಗ್ಗದ ಕಾರಣ ಕೊನೆಗೂ ಈತ ಅಲ್ಲಿಂದ ಕಾಲ್ ಕಿತ್ತಿದ್ದಾನೆ.
