ಸುದ್ದಿ ಕನ್ನಡ ವಾರ್ತೆ
ಬನವಾಸಿಯ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ,ವಿದ್ಯುತ್ ಗ್ರಿಡ್ ಸ್ಥಾಪನೆಯಾಗಿ ೫ ವರ್ಷ ಕಳೆದರೂ ಸಹ ಇನ್ನೂ ಕಾರ್ಯಾರಂಭ ಮಾಡದ ಕಾರಣ ಬನವಾಸಿ ಭಾಗಕ್ಕೆ ವಿದ್ಯುತ್ ಪೂರೈಕೆಯಲ್ಲಿ ಪ್ರತಿ ದಿನವೂ ವ್ಯತ್ಯಯವಾಗುತ್ತಿದ್ದು, ರೈತರು ಸಾರ್ವಜನಿಕರು ಪ್ರತಿ ದಿನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಬಿಜೆಪಿ ರೈತ ಮೋರ್ಚಾ ಹಾಗೂ ಬನವಾಸಿ ಬಿಜೆಪಿ ಮಂಡಳ ವತಿಯಿಂದ ನಗರದ ಹೆಸ್ಕಾಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು .
ಬನವಾಸಿ ಮಧುಕೇಶ್ವರ ದೇವಾಲಯದಿಂದ ಬೈಕ್ ರ್ಯಾಲಿ ಮೂಲಕ ಶಿರಸಿಗೆ ಆಗಮಿಸಿದ ಪ್ರತಿಭಟನಾಕಾರರು, ಮಾರಿಕಾಂಬಾ ದೇವಿಯ ದರ್ಶನ ಪಡೆದು ಬಳಿಕ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಮಾತನಾಡಿದ ಬಿಜೆಪಿ ಬನವಾಸಿ ಮಂಡಳದ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ನಮ್ಮ ಶಾಸಕರಿಗೆ ಯಾವುದೋ ಒಂದು ಯೋಜನೆಯನ್ನು ತಂದರೆ ಆ ಯೋಜನೆಯ ಪ್ರತಿಫಲ ಜನರಿಗೆ ಸಿಗುವುದು ಮುಖ್ಯವಲ್ಲ, ಬದಲಾಗಿ ಅವರಿಗೆ ಬರಬೇಕಾದ ಲಾಭ ಸಾಕು ಎಂಬಂತಾಗಿದೆ. ಗ್ರಿಡ್ ಹಾಗೂ ಏತ ನೀರಾವರಿ ಯೋಜನೆಯಡಿ ಕೆರೆ ತುಂಬಿಸುವ ಯೋಜನೆ ಈಗಾಗಲೇ ಎಸ್ಟಿಮೇಷನ್ ಪ್ರಕಾರ ಕೆಲಸ ಮುಗಿದಿದೆ ಹಾಗಾಗಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಶಾಸಕರಿಗೆ ಇಲ್ಲದಂತಾಗಿದೆ. ಅಂಡಗಿಯಲ್ಲಿ ಸುಮಾರು ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ಶೀತಲೀಕರಣ ಘಟಕವನ್ನು ನಿರ್ಮಿಸಲು ನಮ್ಮ ಯಡಿಯೂರಪ್ಪನವರ ಬಿಜೆಪಿ ಸರ್ಕಾರದಲ್ಲಿ ಮಂಜೂರಾತಿ ನೀಡಲಾಗಿತ್ತು. ಆದರೆ ಇವತ್ತು ಆ ಕಾಮಗಾರಿ ಅರ್ಧಕ್ಕೆ ನಿಂತು ಮಳೆಯಿಂದಾಗಿ ಸೋರುತ್ತಿದೆ ಎಂದರು.
ನಮ್ಮ ಭಾಗದ ರಸ್ತೆಗಳನ್ನು ಒಮ್ಮೆ ಗಮನಿಸಿ. ದಾಸನಕೊಪ್ಪದಿಂದ ಕುಪ್ಗಡ್ಡೆ ಮಾರ್ಗವಾಗಿ ಹೊಸಕೊಪ್ಪಕ್ಕೆ ಹೋಗುವ ಶಿರಸಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಕನಿಷ್ಠ ಒಂದು ರಸ್ತೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗದ ಈ ಸರ್ಕಾರ ಮತ್ತು ಶಾಸಕರು ಅಧಿಕಾರದಲ್ಲಿ ಏಕಿರಬೇಕು? ಈ ಲಜ್ಜೆಗೇಡಿ ಸರ್ಕಾರವು ಆದಷ್ಟು ಬೇಗ ಅಧಿಕಾರದಿಂದ ತೊಲಗಲಿ. ನಮಗೆ ನಿರಂತರವಾಗಿ ವಿದ್ಯುತ್ ಸಂಪರ್ಕ ಬೇಕಾಗಿರುತ್ತದೆ. ಕೊಳವೆ ಬಾವಿಗಳಲ್ಲಿ ೨೪ ಗಂಟೆಗಳ ಕಾಲ ನೀರಿರುತ್ತದೆ, ಆದರೆ ವಿದ್ಯುತ್ ಇರುವುದಿಲ್ಲ. ಅದೇ ರೀತಿಯಾಗಿ, ವೋಲ್ಟೇಜ್ ಕೊರತೆಯಿಂದಾಗಿ ಒಂದು ಫೇಸ್ನಲ್ಲಿ ೧೦೦ ವೋಲ್ಟೇಜ್ ಕೂಡ ಇರುವುದಿಲ್ಲ. ಒಟ್ಟು ಮೂರು ಫೇಸ್ಗಳಿಂದ ಕನಿಷ್ಠ ೨೮೦ ವೋಲ್ಟೇಜ್ ಸಿಗುತ್ತಿಲ್ಲ. ಇದರಿಂದಾಗಿ ರೈತರ ಅನೇಕ ಪಂಪ್ಸೆಟ್ಗಳು ಸುಟ್ಟು ಹೋಗಿವೆ. ಇದಕ್ಕೆಲ್ಲ ಹೊಣೆಗಾರರು ಯಾರು? ಎಂದು ಪ್ರಶ್ನಿಸಿದರು.
ಸಂಬ0ಧಪಟ್ಟ ಇಲಾಖೆಯವರು ಈ ಕೂಡಲೇ ಈ ವಿಷಯವನ್ನು ಗಮನಿಸಬೇಕು. ಗ್ರಿಡ್ ಆರಂಭವಾಗದೆ ಐದಾರು ವರ್ಷಗಳು ಕಳೆದಿವೆ. ಅಷ್ಟೇ ಅಲ್ಲದೆ, ಇಂದು ಕೆರೆ ತುಂಬಿಸುವ ಯೋಜನೆ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಯನ್ನು ರೂಪಿಸಿ, ರೈತರಿಗೆ ಒಂದು ಪೈಸೆ ಪ್ರಯೋಜನವಾಗಿಲ್ಲ. ಇಂದಿನವರೆಗೂ ಒಂದು ಹನಿ ನೀರನ್ನು ಕೂಡ ಕೆರೆಗೆ ತುಂಬಿಸಿಲ್ಲ. ಹೀಗಿರುವಾಗ ಈ ಬೇಜವಾಬ್ದಾರಿ ಶಾಸಕರು ನಮಗೆ ಏಕೆ ಬೇಕು? ಅವರನ್ನು ಅಧಿಕಾರದಿಂದ ಕಿತ್ತೊಗೆಯುವ ಪರಿಸ್ಥಿತಿ ಈಗ ನಮ್ಮ ಕಾರ್ಯಕರ್ತರಲ್ಲಿ ಬಂದಿದೆ ಎಂದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಮಾತನಾಡಿ , ಬನವಾಸಿ, ದಾಸನಕೊಪ್ಪ ಈ ಭಾಗದ ಅಡಿಕೆ ಬೆಳೆಗಾರರು, ರೈತರು ತಮ್ಮ ನೋವನ್ನು ಹೇಳಿಕೊಳ್ಳಲು ಇಂದು ಬೈಕ್ ರ್ಯಾಲಿ ಮುಖಾಂತರವಾಗಿ ಶಿರಸಿಯ ಹೆಸ್ಕಾಂ ಕಚೇರಿಗೆ ಬಂದು ಮನವಿ ನೀಡುತ್ತಿದ್ದಾರೆ. ಇಲ್ಲಿ ಬಂದ ಎಲ್ಲರೂ ಕೂಡ ಅಪ್ಪಟ ರೈತರು, ಅಪ್ಪಟ ಅನ್ನದಾತರು. ಇಂತಹ ರೈತರು ಕಳೆದ ನಾಲ್ಕೈದು ವರ್ಷದಿಂದ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಮೇಲೆ ೨೪ ಗಂಟೆಗಳ ಕಾಲ ಕರೆಂಟ್ ಕೊಡುತ್ತೇವೆ ಎಂದು ಸುಳ್ಳನ್ನು ಹೇಳುವುದರ ಮುಖಾಂತರವಾಗಿ ಈ ಸರ್ಕಾರ ನಮಗೆ, ರೈತರಿಗೆ ಅನ್ಯಾಯ ಮಾಡುತ್ತಿದೆ. ಹಲವಾರು ಬಾರಿ ಮನವಿ ಕೊಟ್ಟರು ಕೂಡ ಇದರ ಕುರಿತು ಗಮನ ಹರಿಸುತ್ತಿಲ್ಲ. ಒಬ್ಬ ರೈತ ಬೆಳೆ ಬೆಳೆದಿಲ್ಲ ಎಂದಾದರೆ ನಾವು ಹೊಟ್ಟೆಗೆ ಏನು ತಿನ್ನುತ್ತೇವೆ? ಅತಿಯಾದ ವಿದ್ಯುತ್ ವ್ಯತ್ಯಯವಾದರೆ ರೈತರು ಬೆಳೆಯನ್ನು ಹೇಗೆ ಬೆಳೆಯಬೇಕು? ರೈತರು ಜೀವನ ಹೇಗೆ ಮಾಡಬೇಕು? ಇತ್ತೀಚೆಗೆ ರಾಜ್ಯದಲ್ಲಿ ಸಾವಿರಾರು ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಂಡಗೋಡದಲ್ಲೂ ಕೂಡ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ರೀತಿಯ ಸಮಸ್ಯೆ ಆದರೂ ಕೂಡ ಯಾರೂ ಕೂಡ ಗಮನ ಕೊಡುತ್ತಿಲ್ಲ. ವಿಶೇಷವಾಗಿ ಸ್ಥಳೀಯ ಶಾಸಕರ ನಿರ್ಲಕ್ಷ್ಯವೇ ಜನ ಕಂಗಾಲಾಗಲು ಕಾರಣವಾಗಿದೆ. ಪ್ರತಿಯೊಂದು ಹಳ್ಳಿಯಲ್ಲೂ ಈ ಕುರಿತು ಮಾತನಾಡುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ರೈತರು ದಿನ ದಿನವೂ ಕಷ್ಟ ಪಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಬೆಳೆದ ಶುಂಠಿ, ಅನಾನಸ್, ಅಡಿಕೆ ಬೆಳೆ ಒಣಗುತ್ತಿದೆ. ನಮ್ಮ ಸ್ಥಳೀಯ ಶಾಸಕರ ನಿರ್ಲಕ್ಷ್ಯ ರೈತರ ಸಮಸ್ಯೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಬನವಾಸಿ ಭಾಗದಲ್ಲಿ ಗ್ರಿಡ್ ಆಗಿ ಓಪನಿಂಗ್ ಆಗಿ ಐದಾರು ವರ್ಷ ಆದರೂ ಆ ಗ್ರಿಡ್ ಇಂದಿಗೂ ಕಾರ್ಯಾರಂಭ ಮಾಡಿಲ್ಲ. ಅದಲ್ಲದೆ ಇವತ್ತು ಕೆರೆ ತುಂಬಿಸುವAತಹ ಯೋಜನೆಯನ್ನು ತರಲಾಗಿತ್ತು. ಆದರೆ ಇದುವರೆಗೂ ಒಂದೇ ಒಂದು ಹನಿ ನೀರನ್ನು ಕೆರೆಗೆ ಹಾಯಿಸಲಾಗಿಲ್ಲ. ಇದಕ್ಕೆಲ್ಲಾ ಕಾರಣ ಕರೆಂಟ್ನ ಸಮಸ್ಯೆ .ಕೇವಲ ಈ ಸಮಸ್ಯೆ ಮಾತ್ರ ಅಲ್ಲದೆ ಮೂಲಭೂತ ಸೌಕರ್ಯವಾದ ರಸ್ತೆ ಗುಂಡಿ ಮುಚ್ಚುವುದಕ್ಕೂ ಸಹ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಈ ಸರ್ಕಾರ ಇದೆಯೋ ಅಥವಾ ಸತ್ತಿದೆಯೋ , ಭ್ರಷ್ಟಾಚಾರದಲ್ಲಿ ಮುಳುಗಿದೆಯೋ ಎಂಬ ಅನುಮಾನ ಬರುತ್ತಿದೆ ಎಂದರು.
ಈ ವೇಳೆ ಬನವಾಸಿ ಮಂಡಲದ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿ ಗಳಾದ ಗಳಾದ ಶಂಕರ ಗೌಡ್ರು ಭಾಶಿ, ಮಂಜುನಾಥ ನಾಯ್ಕ, ಬನವಾಸಿ ಗ್ರಾ ಪಂ ಮಾಜಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ವಿ.ಎಸ್. ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂತಲ ಸಣ್ಣಲಿಂಗಣ್ಣನವರ್, ಗೀತಾ, ಜ್ಯೋತಿ ಚೆನನಯ್ಯ, ಸತ್ಯವತಿ ನಾಯ್ಕ, ಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಶೇಖರ ಗೌಡ ಕಡಗೋಡ, ರವಿ ದೇವಾಡಿಗ, ಸಂತೋಷ ಗೌಡ ಭಾಶಿ, ಶಂಭುಲಿಂಗ ಗೌಡ, ರಾಘು ದೇವಾಡಿಗ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಪುಟ್ಟರಾಜ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಾಯಿನಾಥ ಕುರುಬರ್, ವಿ.ಎಂ. ಹೆಗಡೆ ಕಬ್ಬೆ, ಆನಂದ ಸಾಲೇರ, ಉಷಾ ಹೆಗಡೆ, ರಮಾಕಾಂತ ಭಟ್, ನಾಗರಾಜ ನಾಯ್ಕ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುರೇಶ್ ನಾಯ್ಕ, , ವಿಜಯ ಕುಮಾರ್, ಇತರರು ಇದ್ದರು
ಒಂದು ತಿಂಗಳೊಳಗೆ ನಮಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಡಲೇಬೇಕು. ಇಲ್ಲದಿದ್ದರೆ ನಾವು ಯಾವುದೇ ಕಾರಣಕ್ಕೂ ಈ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬನವಾಸಿಯಿಂದ ಶಿರಸಿ ಹೆಸ್ಕಾಂ ಕಚೇರಿ ವರೆಗೆ ಬೈಕ್ ರಾಲಿ ನಡೆಸಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ರೈತರು ಅನುಭವಿಸುತ್ತಿರುವ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಡಲಾಯಿತು , ನಂತರ ಅಧಿಕಾರಿಗಳು ಮಾತನಾಡಿ ಒಂದು ತಿಂಗಳ ಒಳಗಾಗಿ ಸಮಸ್ಯೆ ಬಗೆ ಹರಿಸುವ ಆಶ್ವಾಸನೆ ನೀಡಿದರು.
