Banner Ad

ಸುದ್ದಿ ಕನ್ನಡ ವಾರ್ತೆ
ಕಾರವಾರ: ನಗರದ ಹಬ್ಬುವಾಡದ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ‘ಮಾವಿನ ಹಣ್ಣಿನ ಉತ್ಸವ’ವು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ನೆರವೇರಿತು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ದೇವರಿಗೆ ಮಾವಿನ ಹಣ್ಣುಗಳನ್ನು ಸಮರ್ಪಿಸಿ ಪುನೀತರಾದರು.

ಉತ್ಸವದ ಅಂಗವಾಗಿ ಭಕ್ತಾದಿಗಳು 1 ಕ್ವಿಂಟಾಲ್‌ಗೂ ಅಧಿಕ ಮಾವಿನ ಹಣ್ಣನ್ನು ದೇವರಿಗೆ ಅರ್ಪಿಸಿದ್ದರು. ಹೂವುಗಳಿಗಿಂತ ಹೆಚ್ಚಾಗಿ ಮಾವಿನ ಎಲೆ ಹಾಗೂ ವಿವಿಧ ತಳಿಯ ಮಾವಿನ ಹಣ್ಣುಗಳಿಂದಲೇ ದೇವಸ್ಥಾನ ಮತ್ತು ಗಣಪತಿಯ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಈ ಮನಮೋಹಕ ದೃಶ್ಯವು ಭಕ್ತರ ಕಣ್ಮನ ಸೆಳೆಯಿತು. ಉತ್ಸವದ ಪ್ರಯುಕ್ತ ಮಹಾಗಣಪತಿಗೆ ಮಾವಿನ ಹಣ್ಣಿನ ರಸದೊಂದಿಗೆ ವಿಶೇಷ ಅಭಿಷೇಕ ಮಾಡಲಾಯಿತು. ಬಂದಂತಹ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಮಾವಿನ ಹಣ್ಣು, ಮಾವಿನ ಹಣ್ಣಿನ ರಸಾಯನ ಹಾಗೂ ಮಾವಿನ ಕಾಯಿ ಚಿತ್ರಾನ್ನವನ್ನು ವಿತರಿಸಲಾಯಿತು. ರಾತ್ರಿ ದೇವರಿಗೆ ಅರ್ಪಿಸಲಾದ ಮಾವಿನ ಹಣ್ಣುಗಳ ಹರಾಜು ಪ್ರಕ್ರಿಯೆ ಕೂಡ ನಡೆಯಿತು.

Banner Ad

ಬಾಡ ಗ್ರಾಮದ ಮಹಾದೇವ ವಿನಾಯಕ ಟ್ರಸ್ಟ್ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು, ಅರ್ಚಕರು ಹಾಗೂ ಹಬ್ಬುವಾಡ ಪರಿಸರದ ಭಕ್ತಾದಿಗಳ ಸಕ್ರಿಯ ಸಹಕಾರದೊಂದಿಗೆ ಈ ವರ್ಷದ ಉತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು.

Banner Ad