ಸುದ್ದಿ ಕನ್ನಡ ವಾರ್ತೆ

. ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವಜನಿಕರ ಹಾಗೂ ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿದ್ದ ಕಾಚಿಗುಡ-ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲು ಇನ್ನು ಕುಮಟಾಕ್ಕೂ ಬರಲಿದೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನವಿಯ ಮೇರೆಗೆ ಕಾಚಿಗುಡ-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲನ್ನು (ಸಂಖ್ಯೆ: 12789/12790) ಈಗ ಅಧಿಕೃತವಾಗಿ ಕುಮಟಾ ನಿಲ್ದಾಣದವರೆಗೆ ಬರಲಿದೆ.
ಸಂಸದರು ನವದೆಹಲಿಯಲ್ಲಿ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೇಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ, ಈ ಭಾಗದ ಜನರ ಅವಶ್ಯಕತೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಹೈದರಾಬಾದ್ ಭಾಗಕ್ಕೆ ನೇರ ಸಂಪರ್ಕದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದರು. ಅವರ ಮನವಿಗೆ ಕೇಂದ್ರ ರೇಲ್ವೆ ಸಚಿವಾಲಯವು ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ರೈಲು ಸೇವೆಯ ವಿಸ್ತರಣೆಯಿಂದಾಗಿ ಕುಮಟಾ ಮತ್ತು ಸುತ್ತಮುತ್ತಲಿನ ಕ್ಷೇತ್ರದ ಜನತೆಗೆ, ವ್ಯಾಪಾರಸ್ಥರಿಗೆ ಹಾಗೂ ಪ್ರವಾಸಿಗರಿಗೆ ಹೈದರಾಬಾದ್ (ಕಾಚಿಗುಡ) ಭಾಗಕ್ಕೆ ನೇರ ಸಂಪರ್ಕ ದೊರೆಯಲಿದ್ದು, ಇದರಿಂದ ಜಿಲ್ಲೆಯ ಆರ್ಥಿಕ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಸಹಕಾರಿಯಾಗಲಿದೆ. 12789 ಕಾಚಿಗುಡದಿಂದ ಬೆಳಿಗ್ಗೆ 6:05ಕ್ಕೆ ಹೊರಟು, ಮಧ್ಯಾಹ್ನ 13:48ಕ್ಕೆ ಮುರುಡೇಶ್ವರ ತಲುಪಲಿದೆ ಮತ್ತು ಮಧ್ಯಾಹ್ನ 14:30ಕ್ಕೆ ಕುಮಟಾ ನಿಲ್ದಾಣಕ್ಕೆ ಆಗಮಿಸಲಿದೆ. ರೈಲು ಸಂಖ್ಯೆ 12790 ಕುಮಟಾ ನಿಲ್ದಾಣದಿಂದ ಮಧ್ಯಾಹ್ನ 15:10ಕ್ಕೆ ಹೊರಟು, 15:50ಕ್ಕೆ ಮುರುಡೇಶ್ವರ ತಲುಪಿ, ಮರುದಿನ ರಾತ್ರಿ 23:40ಕ್ಕೆ ಕಾಚಿಗುಡ ತಲುಪಲಿದೆ.