Banner Ad

ಸುದ್ದಿ ಕನ್ನಡ ವಾರ್ತೆ
​ಶಿರಸಿ: ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಮತ್ತು ಮಲೆನಾಡಿನ ಜೀವವೈವಿಧ್ಯದ ಉಳಿವಿಗೆ ಸಂಬಂಧಿಸಿದಂತೆ ವೃಕ್ಷಲಕ್ಷ ಆಂದೋಲನ ಹಾಗೂ ವಿವಿಧ ಪರಿಸರ ಸಂಘಟನೆಗಳ ಪ್ರಮುಖರ ಸಮಾಲೋಚನಾ ಸಭೆ ಸಾಗರದ ವರದಾಶ್ರೀ ಸಭಾಂಗಣದಲ್ಲಿ ಜರುಗಿತು. ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ನೇತೃತ್ವದಲ್ಲಿ ನಡೆದ ಈ ಸಭೆಯು ಅರಣ್ಯ ನಾಶಕ್ಕೆ ಕಾರಣವಾಗುವ ಬೃಹತ್ ಯೋಜನೆಗಳ ವಿರುದ್ಧ ಹತ್ತು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ.

​ಸಭೆಯ ನಂತರ ನಿರ್ಣಯಗಳ ಪ್ರತಿ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅಸಿಸ್ಟೆಂಟ್ ಕಮಿಷನರ್ ವಿವೇಕ್‌ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದೇ ವೇಳೆ ರಾಷ್ಟ್ರೀಯ ಸಂಚಾರ ಮಂಡಳಿಯ ನಿರ್ದೇಶಕ ಪ್ರಸನ್ನ ಕೆರೆಕೈ ಕುಮಾರಿ ಅವರಿಗೆ ಅಫಿಡವಿಟ್ ಸಲ್ಲಿಸಿ ಸಂಚಾರ ಪದಾರ್ಥಗಳ ಬಗ್ಗೆ ಗಮನ ಸೆಳೆಯಲು ಒತ್ತಾಯಿಸಲಾಯಿತು.

Banner Ad

​ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ನೀಡಬಾರದು. ಕೆಪಿಸಿಎಲ್ ಸಂಸ್ಥೆಯು ಅರಣ್ಯ ಕಾಯ್ದೆ ಉಲ್ಲಂಘಿಸುತ್ತಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಅಘನಾಶಿನಿ ಮತ್ತು ಬೆಡ್ತಿ ನದಿ ತಿರುವು ಯೋಜನೆಗಳು ಶರಾವತಿ ನದಿಯನ್ನು ಹಿಂಬಾಗಿಲಿನಿಂದ ಬಳಸಿಕೊಳ್ಳುವ ತಂತ್ರವಾಗಿದ್ದು, ಈ ಯೋಜನೆಗಳನ್ನು ರಾಜ್ಯ ಸರ್ಕಾರ ತಕ್ಷಣ ಕೈಬಿಡಬೇಕು. ಸೊರಬದ ಚಂದ್ರಗುತ್ತಿ ವ್ಯಾಪ್ತಿಯ ಬಣ್ಣಿಗೊಬ್ಬ ಗ್ರಾಮದಲ್ಲಿ ಬೃಹತ್ ಗಣಿಗಾರಿಕೆಗೆ ಜಿಲ್ಲಾಡಳಿತ ಅನುಮತಿ ನೀಡಬಾರದು. ಮಲೆನಾಡು ಭಾಗದ 7 ಜಿಲ್ಲೆಗಳ ಶಾಸಕರ ವಿಶೇಷ ಸಭೆಯನ್ನು ವಿಧಾನಸಭಾಧ್ಯಕ್ಷರು ಕರೆಯಬೇಕು. ಪಶ್ಚಿಮ ಘಟ್ಟದಲ್ಲಿ ಬೃಹತ್ ಯೋಜನೆಗಳು ಬಾರದಂತೆ ಶಾಸಕರು ಒಮ್ಮತದ ನಿರ್ಣಯ ಕೈಗೊಳ್ಳಬೇಕು. ಮಲೆನಾಡಿನ ಅಭಿವೃದ್ಧಿ ಯೋಜನೆಯನ್ನು ರಾಜ್ಯ ಅರಣ್ಯ ಇಲಾಖೆಯ ಸಮಾಲೋಚನೆಯಲ್ಲಿ ಜಾರಿಗೆ ತರಬೇಕು ಎಂದು ಒತ್ತಾಯಿಸುವ ನಿರ್ಣಯ ಕೈಗೊಂಡಿದೆ.

​ಸೊರಬ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶ್ರೀಪಾದ ಬಣ್ಣಿಗೊಬ್ಬ ಅವರು ಕೊಡಗು ಮತ್ತು ದೇವರಕಾಡುಗಳ ರಕ್ಷಣೆಗೆ ಕರೆ ನೀಡಿರುವುದನ್ನು ಸಭೆ ಅಭಿನಂದಿಸಿದೆ.ಮಲೆನಾಡು ಭಾಗಗಳಲ್ಲಿ ಸಂಭವಿಸಿದ ಭೂಕುಸಿತವು ಅವೈಜ್ಞಾನಿಕ ಕಾಮಗಾರಿ ಸಾಕ್ಷಿಯಾಗಿದೆ. 2021ರ ಭೂಕುಸಿತ ತಜ್ಞರ ಸಮಿತಿಯ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. ಮೇ 22ರ ಜೀವವೈವಿಧ್ಯ ದಿನ ಹಾಗೂ ಜೂನ್ 5ರ ಪರಿಸರ ದಿನದಂದು ಹಳ್ಳಿಗಳ ಪ್ರತಿ ಮನೆ ಮತ್ತು ಶಾಲೆಗಳಲ್ಲಿ ‘ವೃಕ್ಷ ಉತ್ಸವ’ ನಡೆಸಲು ನಿರ್ಧರಿಸಲಾಗಿದೆ. ಮಲೆನಾಡಿನಲ್ಲಿ ವ್ಯಾಪಕವಾಗಿರುವ ಮಂಗನಕಾಯಿಲೆ ನಿಯಂತ್ರಿಸಲು ಸರ್ಕಾರ ವಿಶೇಷ ಪ್ರತಿಬಂಧಕ ಕ್ರಮ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದೆ.

​ವೃಕ್ಷಲಕ್ಷ ಆಂದೋಲನದ ಮಾರ್ಗದರ್ಶಕರಾಗಿದ್ದ ಹಿರಿಯ ವಿದ್ವಾಂಸ ಹಾಗೂ ಲೇಖಕ ಎಸ್.ಆರ್. ರಾಮಸ್ವಾಮಿ ಅವರ ನಿಧನಕ್ಕೆ ಸಭೆಯು ತೀವ್ರ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿತು. ಪರಿಸರ ಸಂರಕ್ಷಣಾ ಸಭೆಯಲ್ಲಿ ಶಿವಮೊಗ್ಗ ಪರ್ಯಾಯವೇದಿಕೆ ಸಂಸ್ಥೆಯ ಡಾ. ಶ್ರೀಪತಿ, ಬಾಲಕೃಷ್ಣ ಗಾಯ್ಕಿ, ಪ್ರಸಾದ ರಾವ್ ಬಣ್ಣಿಗೊಬ್ಬ, ಮಂಜುನಾಥ ಬಣ್ಣಿಗೊಬ್ಬ, ಗಂಗಾಧರ ಗೌಡ ಚಂದ್ರಗುತ್ತಿ, ನಾಗೇಂದ್ರ ಸಾಗರ ಸೇರಿದಂತೆ ಹಲವು ಪರಿಸರ ಪ್ರೇಮಿಗಳು ಪಾಲ್ಗೊಂಡಿದ್ದರು. ಸಂಚಾಲಕ ಕೆ. ವೆಂಕಟೇಶ ಸ್ವಾಗತಿಸಿದರು.

Banner Ad