ಸುದ್ದಿ ಕನ್ನಡ ವಾರ್ತೆ
ಸಾಗರ: ತಾಲೂಕಿನ ವರದಪುರದ ಪರಮಪೂಜ್ಯ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳವರ ಕೃಪಾಶೀರ್ವಾದದಿಂದ ಲೋಕಕಲ್ಯಾಣಾರ್ಥವಾಗಿ, ಯುದ್ಧಭೀತಿಯ ವಿಶ್ವದಲ್ಲಿ ಶಾಂತಿ ನೆಲೆಸಲು, ಧರ್ಮರಕ್ಷಣೆಗಾಗಿ ಶ್ರೀಗುರು ಭಕ್ತಾದಿಗಳೆಲ್ಲರೂ ಸೇರಿ ೧೩ ಕೋಟಿ ಶ್ರೀರಾಮತಾರಕ ಜಪ ಮಹಾಯಜ್ಞ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಶ್ರೀಕ್ಷೇತ್ರ ವರದಪುರದ ಶ್ರೀಧರ ಸೇವಾ ಮಹಾಮಂಡಲ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಜಪದಲ್ಲಿ ತೊಡಗಿಸಿಕೊಳ್ಳಲು ಭಕ್ತರಿಗೆ ಕರೆ ನೀಡಲಾಗಿದ್ದು, ಶ್ರೀರಾಮ ಜಯರಾಮ ಜಯ ಜಯ ರಾಮ ಎಂಬ ಜಪಮಂತ್ರವನ್ನು ಜುಲೈ ೨೯ರ ಬುಧವಾರ ಗುರುಪೂರ್ಣಿಮೆಯ ಶುಭದಿನ ಆರಂಭಿಸಬೇಕಿದ್ದು, ಆ ಕುರಿತಾಗಿ ಹಲವು ಸೂಚನೆಗಳನ್ನು ನೀಡಲಾಗಿದೆ.
ದಿನದಲ್ಲಿ ಯಾವ ಸಮಯದಲ್ಲಾದರೂ, ಭಕ್ತಿಭಾವದಿಂದ ಶ್ರೀರಾಮತಾರಕ ಮಂತ್ರ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂದು ಜಪಿಸಬಹುದು. ಶ್ರೀರಾಮ ತಾರಕ ಮಂತ್ರ ಜಪವನ್ನು ಯಾವುದೇ ಜಾತಿ, ಮತ, ಪಂಥ, ಸ್ತ್ರೀ-ಪುರುಷ ಯಾವುದೇ ಭೇದವಿಲ್ಲದೆ ಸರ್ವರೂ ಮಾಡಬಹುದು. ಜಪವನ್ನು ೨೯-೦೭-೨೦೨೬ರ ಗುರುಪೂರ್ಣಿಮೆ (ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರ ಚಾತುರ್ಮಾಸ ಶುಭಾರಂಭ) ದಿನದಿಂದಲೇ ಪ್ರಾರಂಭಿಸಬೇಕು.

ಪ್ರತಿದಿನ ಮಾಡಿದ ಜಪ ಸಂಖ್ಯೆಯ ಲೆಕ್ಕವನ್ನು ಇಟ್ಟುಕೊಂಡು, ವಾರದ ಅಂತ್ಯದಲ್ಲಿ (ಪ್ರತಿ ಭಾನುವಾರ) ಆ ವಾರದ ಜಪದ ಒಟ್ಟು ಲೆಕ್ಕವನ್ನು ವಿಳಾಸ (ಒಮ್ಮೆ ಕಳಿಸಿದರೆ ಸಾಕು) ಸಮೇತ ವಾಟ್ಸಾಪ್ ಸಂಖ್ಯೆ ೭೦೧೯೧೯೨೦೬೯ ಇದಕ್ಕೆ ವಾಟ್ಸಾಪ್ ಮೂಲಕ ಕಳುಹಿಸಬೇಕು. ಜಪದ ಸಂಖ್ಯೆಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸುವುದರಿಂದ ಪ್ರತಿ ವಾರಕ್ಕೆ ಒಮ್ಮೆ ಮಾತ್ರ ಕಳಿಸಬೇಕು.

ಮಹಾಮಂಡಲದಿಂದ ಮುಂದಿನ ಸೂಚನೆ ಬರುವವರೆಗೂ ಜಪವನ್ನು ಮುಂದುವರೆಸಬೇಕು. ಯಾವುದೇ ಸಂದೇಹಗಳಿದ್ದರೆ ಸೂಚಿತ ಸಂಖ್ಯೆಗೆ ವಾಟ್ಸಾಪ್ ಮಾಡಿ ಎಂದು ಪ್ರಕಟಣೆಯಲ್ಲಿ ಮಹಾಮಂಡಲ ಹೇಳಿದೆ.