ಸುದ್ದಿ ಕನ್ನಡ ವಾರ್ತೆ
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಳಶಿರಸ್‌ ತಾಲ್ಲೂಕಿನ ತಾಂದುಳವಾಡಿ ಗ್ರಾಮದ ಸಮೀಪ ಭಾನುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಿಕಪ್ ವಾಹನ ಬಾವಿಗೆ ಉರುಳಿಬಿದ್ದು ಒಂದೇ ಕುಟುಂಬದ 8 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 4 ಮಹಿಳೆಯರು ಹಾಗೂ 4 ಮಕ್ಕಳು ಸೇರಿದ್ದಾರೆ.

ಮಾಹಿತಿಯ ಪ್ರಕಾರ, ವಾಹನದಲ್ಲಿ ಸುಮಾರು 15 ಮಂದಿ ಪ್ರಯಾಣಿಸುತ್ತಿದ್ದು, ಅವರು ಪಂಢರ್ಪುರ ತಾಲ್ಲೂಕಿನ ರಂಜನಿ ಗ್ರಾಮದವರು ಹಾಗೂ ಪರಸ್ಪರ ಸಂಬಂಧಿಕರಾಗಿದ್ದರು. ಸಿದ್ಧನಾಥ ದೇವಾಲಯದ ದರ್ಶನ ಮುಗಿಸಿ ಹಿಂದಿರುಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಬದಿಯ ಹೊಲಕ್ಕೆ ನುಗ್ಗಿ, ಅಲ್ಲಿದ್ದ ತೆರೆದ ಬಾವಿಗೆ ಬಿದ್ದಿದೆ.

ಅಪಘಾತದ ಬಳಿಕ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ 7 ಮಂದಿಯನ್ನು ಜೀವಂತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಈ ದುರ್ಘಟನೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿ, ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿ, ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50,000 ನೆರವು ಘೋಷಿಸಿದ್ದಾರೆ.