ಸುದ್ದಿ ಕನ್ನಡ ವಾರ್ತೆ
ಹೊನ್ನಾವರ:ತಾಲೂಕಿನ ಕಾಸರಕೋಡ ಕಡಲತೀರಕ್ಕೆ ಸತತ 6ನೇ ಬಾರಿ ಬ್ಲೂ ಫ್ಲಾಗ್ ಮಾನ್ಯತೆ ದೊರೆತಿದ್ದು, ಇದರ ಅಂಗವಾಗಿ ಕಾಸರಕೋಡ ಕಡಲತೀರದಲ್ಲಿ ಭಾನುವಾರ ಬ್ಲೂ ಫ್ಲಾಗ್ ಧ್ವಜಾರೋಹಣವನ್ನು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ ಭಟ್ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ದೇಶಾದ್ಯಂತ ಈ ವರ್ಷ 14 ಕಡಲತೀರಗಳಿಗೆ ಬ್ಲೂ ಫ್ಲಾಗ್ ಮಾನ್ಯತೆ ದೊರೆತಿದ್ದು, ಕರ್ನಾಟಕದಲ್ಲಿ ಮೂರು ಕಡಲತೀರಗಳು ಈ ಪಟ್ಟಿಗೆ ಸೇರಿವೆ. ಅವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡ ಕಡಲತೀರವೂ ಒಂದಾಗಿದ್ದು, ಕಾಸರಕೋಡ ಕಡಲತೀರಕ್ಕೆ ಇದು ಅರನೇ ಬಾರಿ ಬ್ಲೂ ಫ್ಲಾಗ್ ಮಾನ್ಯತೆ ದೊರೆತಿದೆ. ಇಲ್ಲಿನ ಕಡಲತೀರದ ಸ್ವಚ್ಛತೆ, ಪ್ರವಾಸಿಗರ ಸುರಕ್ಷತೆ, ಉತ್ತಮ ಮೂಲಸೌಕರ್ಯಗಳ ವ್ಯವಸ್ಥೆ ಹಾಗೂ ನೈಸರ್ಗಿಕ ವಸ್ತುಗಳ ಬಳಕೆಯ ಮೂಲಕ ಅಭಿವೃದ್ಧಿ ಪಡಿಸಿರುವುದನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದರು.
ಕಾಸರಕೋಡು ಕಡಲತೀರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಭಾರತ ಸರ್ಕಾರದಿಂದ ಸ್ವಚ್ಛತಾ ಯಂತ್ರಗಳನ್ನು ಒದಗಿಸಲಾಗಿದ್ದು, ಈ ಯಂತ್ರದ ಮೂಲಕ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದ್ದು ಇವರಿಂದ ಸ್ವಚ್ಛತೆ ಪ್ರವಾಸಿಗರಸುರಕ್ಷತೆ ಹಾಗೂ ಮೂಲಸೌಕರ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಬೀಚ್‌ನಲ್ಲಿ ಜೀವ ರಕ್ಷಕರನ್ನು ಕೂಡಾ ನಿಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಾರವಾರದ ರವೀಂದ್ರ ಕಡಲತೀರ ಹಾಗೂ ಅಪ್ಸರಕೊಂಡ ಕಡಲತೀರಗಳನ್ನು ಸಹ ಮುಂದಿನ ದಿನಗಳಲ್ಲಿ ಬ್ಲೂ ಫ್ಲಾಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದು ತಿಳಿಸಿದರು.