ಸುದ್ದಿ ಕನ್ನಡ ವಾರ್ತೆ
ಯರಗಟ್ಟಿ : ನಾವು ಪಡೆಯುವ ವಿದ್ಯೆ, ಹುದ್ದೆಗಳು ಆಯಾ ಅವಧಿ ಹಾಗೂ ಸ್ಥಳಕ್ಕೆ ಪ್ರಾತಿನಿದ್ಯ ಪಡೆಯುತ್ತವೆ. ಆದರೆ ಪ್ರಯತ್ನಪೂರ್ವಕವಾಗಿ ನಾವು ಅಳವಡಿಸಿಕೊಳ್ಳುವ ಉತ್ತಮ ವ್ಯಕ್ತಿತ್ವವು ಸಾರ್ವಕಾಲಿಕ ಹಾಗೂ ಸಾರ್ವತ್ರಿಕ ಮನ್ನಣೆಯನ್ನು ದೊರಕಿಸುತ್ತದೆ ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.

ಸಮೀಪದ ತೆನಿಕೊಳ್ಳದಲ್ಲಿರುವ ಕೆ.ಎಲ್.ಇ. ಸಂಸ್ಥೆಯ ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವ್ಯಕ್ತಿತ್ವ ವಿಕಸನದಲ್ಲಿ ಮೃದು ಕೌಶಲಗಳ ಮಹತ್ವ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ವೃತ್ತಿ ಕೌಶಲಗಳು ನಮ್ಮನ್ನು ಭಿನ್ನ ಕೆಲಸಗಳಿಗೆ ಅಗತ್ಯವಾದ ಪರಿಣಿತಿಯನ್ನು ಒದಗಿಸಿದರೆ ಮೃದು ಕೌಶಲಗಳು ನಮ್ಮ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುತ್ತವೆ. ಸಂವಹನ ಕೌಶಲ, ಹೊಣೆಗಾರಿಕೆ, ನಾಯಕತ್ವ ಗುಣ, ಶಿಸ್ತು, ಸಮಯ ಪ್ರಜ್ಞೆ, ಒತ್ತಡ ನಿರ್ವಹಣೆ, ಬದಲಾವಣೆಗೆ ಒಗ್ಗಿಕೊಳ್ಳುವುದು, ಒಗ್ಗಟ್ಟು ಹಾಗೂ ಪರಿಹಾರ ಶೋಧ ಪ್ರವೃತ್ತಿಯಂತಹ ಮೃದು ಕೌಶಲಗಳು ಆಧುನಿಕ ಜಗತ್ತಿನ ತುರ್ತು ಅಗತ್ಯಗಳಾಗಿವೆ. ವಿದ್ಯಾರ್ಥಿಗಳು ತಮ್ಮ ಪಠ್ಯಾಧಾರಿತ ಅಧ್ಯಯನದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ ಇಂತಹ ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಡೀನರಾದ ಡಾ. ಬಸವರಾಜ ಬಿರಾದಾರ, ಪ್ರಾಧ್ಯಾಪಕರಾದ ಡಾ. ನಿಂಗರಾಜ ಬೆಳಗಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಅಕ್ಷಯ ಅಂಗಡಿ ನಿರೂಪಿಸಿದರು. ಡಾ. ದಯಾನಂದ ಕುಂಬಾರ ವಂದಿಸಿದರು.