ಸುದ್ದಿ ಕನ್ನಡ ವಾರ್ತೆ
​ಶಿರಸಿ: ಮಲೆನಾಡು ಹಾಗೂ ಕರಾವಳಿ ಭಾಗದ ಹೆಮ್ಮೆಯ ಅಪ್ಪೆಮಿಡಿ ಮಾವಿನ ತಳಿಗೆ ಭಾರತೀಯ ಸಾಂಬಾರು ಮಂಡಳಿ ಮಾನ್ಯತೆ ನೀಡುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ದೆಹಲಿಯಲ್ಲಿ ಮನವಿ ಸಲ್ಲಿಸಲಾಗಿದೆ.

​ಈ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಕಣಿವೆಯ ಅಪ್ಪೆಮಿಡಿ ಕುರಿತು ಅಧ್ಯಯನ ನಡೆಸಿರುವ ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಆಶೀಸರ, ಡಾ. ಬಾಲಚಂದ್ರ ಸಾಯಿನಮನೆ ಹಾಗೂ ಸ್ಪೈಸ್‌ ಬೋರ್ಡ್‌ ಸದಸ್ಯ ಪ್ರಸನ್ನ ಕೆರೆಕೈ ಅವರ ಮನವಿಯ ಮೇರೆಗೆ ಈ ವಿಷಯವನ್ನು ಕೇಂದ್ರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

​ಅಪ್ಪೆಮಿಡಿಗೆ ಸ್ಪೈಸ್‌ ಬೋರ್ಡ್‌ ಮಾನ್ಯತೆ ದೊರೆತರೆ ಮಲೆನಾಡಿನ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಹಾಗೂ ಉತ್ತಮ ಬೆಂಬಲ ಬೆಲೆ ಲಭಿಸುವುದರ ಜೊತೆಗೆ, ಅಪ್ಪೆಮಿಡಿ ಉಪ್ಪಿನಕಾಯಿಗೆ ವಿದೇಶಿ ಮಾರುಕಟ್ಟೆ ವಿಸ್ತರಣೆಗೆ ಅವಕಾಶ ಸಿಗಲಿದೆ. ಅಲ್ಲದೆ, ಅಪ್ಪೆಮಿಡಿಗೆ ಭೌಗೋಳಿಕ ಸೂಚಕ (ಜಿಐ) ಟ್ಯಾಗ್‌ ಪಡೆಯುವ ಪ್ರಕ್ರಿಯೆಗೂ ಇದು ನೆರವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

​ನಾಡಿನ ವಿಶಿಷ್ಟ ಉತ್ಪನ್ನವಾದ ಅಪ್ಪೆಮಿಡಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ಮಾನ್ಯತೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಲಾಗಿದೆ.