ಸುದ್ದಿ ಕನ್ನಡ ವಾರ್ತೆ
ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳ ಅಸಮರ್ಪಕ, ಹಾಗೂ ಅದಕ್ಷ ನಿರ್ವಹಣೆಯಿಂದಾಗಿ ಇಡೀ ಕರ್ನಾಟಕವನ್ನು ಆರ್ಥಿಕ ದಿವಾಳಿತನದ ಪ್ರಪಾತಕ್ಕೆ ತಳ್ಳಿದೆ. ಈಗ ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹತಾಶೆಗೊಂಡು, ಒಂದೊಂದೇ ಕುಂಟು ನೆಪಗಳನ್ನು ಒಡ್ಡುತ್ತಾ ಬಡವರ ಮತ್ತು ಅರ್ಹ ಫಲಾನುಭವಿಗಳ ಹಕ್ಕನ್ನೇ ಕಸಿದುಕೊಳ್ಳುವ ಅವಿವೇಕದ ಪರಮಾವಧಿಗೆ ಕೈಹಾಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಸಂಸದರು,ಯಾರು ನಿಜವಾದ ಅರ್ಹರಿದ್ದಾರೋ ಅವರಿಗೆ ಯೋಜನೆಯ ಸೌಲಭ್ಯ ತಲುಪಬೇಕು ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ, ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಗ್ಯಾರಂಟಿಗಳನ್ನು ಘೋಷಿಸುವಾಗ ಮತ್ತು ವೋಟಿನ ಲಾಲಸೆಯಿಂದ ಅವುಗಳನ್ನು ಜಾರಿಗೊಳಿಸುವಾಗ ಸಂಪೂರ್ಣ ಕಣ್ಣುಮುಚ್ಚಿ ಕುಳಿತಿದ್ದ ಸರ್ಕಾರ, ಈಗ ರಾಜ್ಯದ ಖಜಾನೆ ಸಂಪೂರ್ಣ ಬರಿದಾದ ತಕ್ಷಣವೇ ಅತ್ಯಂತ ಕ್ರೂರವಾಗಿ ಬಡವರ ಹೊಟ್ಟೆಯ ಮೇಲೆ ಹೊಡೆಯಲು ಹೊರಟಿದೆ. ಇದು ಸರ್ಕಾರದ ಪರಮ ಜನವಿರೋಧಿ ಹಾಗೂ ವಂಚಕ ಧೋರಣೆಗೆ ಹಿಡಿದ ಕನ್ನಡಿಯಾಗಿದೆ.
”ಯೋಜನೆಯ ಆರಂಭದಲ್ಲೇ ಯಾವುದೇ ವ್ಯವಸ್ಥಿತ ಯೋಜನೆ ಅಥವಾ ಪಾರದರ್ಶಕತೆ ಇಲ್ಲದೆ, ಈಗ ಏಕಾಏಕಿ ‘ಪುನಃ ಸಮೀಕ್ಷೆ’ ಎಂಬ ನಾಟಕವಾಡಿ ಬಡವರನ್ನು ವಂಚಿಸುತ್ತಿರುವುದು ಅತ್ಯಂತ ಖಂಡನೀಯ.”
ಮೊದಲೇ ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ, ದೂರದೃಷ್ಟಿಯಿಂದ ಈ ಯೋಜನೆಗಳನ್ನು ಪಾರದರ್ಶಕವಾಗಿ ಜಾರಿಗೊಳಿಸಿದ್ದರೆ ಈಗ ಆಗಿರುವ ಬೃಹತ್ ಆರ್ಥಿಕ ಲೋಪಗಳನ್ನು ತಡೆಯಲು ಸಾಧ್ಯವಾಗುತ್ತಿತ್ತು. ಈಗಾಗಲೇ ಕೋಟಿಗಟ್ಟಲೆ ಸಾರ್ವಜನಿಕ ಹಣ ಲೂಟಿಯಾಗಿರುವುದನ್ನು ಸ್ವತಃ ಸರ್ಕಾರವೇ ಒಪ್ಪಿಕೊಂಡಿದೆ. ಮೂರು ವರ್ಷಗಳ ಕಾಲ ಕುಂಭಕರ್ಣ ನಿದ್ದೆಯಲ್ಲಿದ್ದ ಸರ್ಕಾರ, ಬೊಕ್ಕಸ ಖಾಲಿಯಾಗುತ್ತಿದ್ದಂತೆ ಏಕಾಏಕಿ ಪರಿಷ್ಕರಣೆಯ ನಿರ್ಧಾರ ಮಾಡಿರುವುದು ಅದರ ಆಡಳಿತಾತ್ಮಕ ಅಪ್ರಬುದ್ಧತೆಗೆ ಸಾಕ್ಷಿ.
ಈ ವೈಫಲ್ಯದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ಚುನಾವಣಾ ಲಾಭಕ್ಕಾಗಿ ಗ್ಯಾರಂಟಿ ಕಾರ್ಡ್ ಹಂಚಿ, ಅಧಿಕಾರಕ್ಕೆ ಬಂದ ಮೇಲೆ ಖಜಾನೆ ಲೂಟಿ ಮಾಡಿ, ಈಗ ಪರಿಷ್ಕರಣೆಯ ನೆಪದಲ್ಲಿ ಬಡವರ ತಟ್ಟೆಗೆ ಕೈಹಾಕುತ್ತಿರುವ ಈ ದಿವಾಳಿ ಕಾಂಗ್ರೆಸ್ ಸರ್ಕಾರವನ್ನು ಕರ್ನಾಟಕದ ಜನತೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ.ಎಂದು ಹೇಳಿದ್ದಾರೆ
