ಸುದ್ದಿ ಕನ್ನಡ ವಾರ್ತೆ

ಶಿರಸಿ: ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಅಕ್ರಮ ಸಾರಾಯಿ ಮಾರಾಟ ಹಾಗೂ ಅಪಾಯಕಾರಿ ಗಾಂಜಾ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಗರದ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅನಂತಮೂರ್ತಿ ಹೆಗಡೆ, ಹಳ್ಳಿಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಿರಂತರವಾಗಿ ನಡೆಯುತ್ತಿದ್ದು, ಸಾರಾಯಿ ಹೆಸರಿನಲ್ಲಿ ವಿಷವನ್ನೇ ಕುಡಿಸುವ ಕೆಲಸವಾಗುತ್ತಿದೆ. ಹಣದ ಆಸೆಗಾಗಿ ಕೆಲವರು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಗಾಂಜಾ ವ್ಯಸನಕ್ಕೆ ಒಮ್ಮೆ ಬಲಿಯಾದ ವ್ಯಕ್ತಿ ಯಾವುದೇ ಕೃತ್ಯಕ್ಕೂ ಮುಂದಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ಜಾತಿ ಹಾಗೂ ಪಕ್ಷ ಭೇದವಿಲ್ಲದೆ ಯುವಕರು ಈ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಒಂದು ತಿಂಗಳೊಳಗೆ ಅಕ್ರಮ ಚಟುವಟಿಕೆಗಳು ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜ್ಯೋತಿ ಭಟ್ ಮಾತನಾಡಿ, ಡ್ರಗ್ಸ್ ಮತ್ತು ಸಾರಾಯಿ ದಂಧೆ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದ್ದು, ಇಂತಹ ದುಶ್ಚಟಗಳಿಗೆ ಯುವ ಸಮುದಾಯ ಬಲಿಯಾಗುತ್ತಿದೆ. ಇದರಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಸಾಂತ್ವನ ವೇದಿಕೆಯ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದ್ದು, ಪೊಲೀಸ್ ಇಲಾಖೆ ಡ್ರಗ್ಸ್ ಮಾಫಿಯಾದ ಮೂಲ ಬೇರನ್ನೇ ಕಿತ್ತೆಸೆಯುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಗಣೇಶ ಕ್ಷತ್ರೀಯ ಬದನಗೋಡ ಮಾತನಾಡಿ, ಆಡಳಿತ ವೈಫಲ್ಯದಿಂದ ಬನವಾಸಿ ಭಾಗದಲ್ಲಿ ಅಕ್ರಮ ಸಾರಾಯಿ ಹಾಗೂ ಗಾಂಜಾ ಮಾರಾಟ ಹೆಚ್ಚಾಗಿದ್ದು, ಇದರಿಂದ ಯುವಕರ ಭವಿಷ್ಯ ಹಾಳಾಗುತ್ತಿದೆ. ಗಾಂಜಾ ಪೆಡ್ಲರ್‌ಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಾಂತೇಶ ಹಾದಿಮನೆ ಮಾತನಾಡಿ, ಉದ್ಯಾನವನ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಯುವಕರು ಗಾಂಜಾ ಸೇವನೆ ಮಾಡುತ್ತಿದ್ದು, ಕೆಲವು ಪ್ರದೇಶಗಳು ಗಾಂಜಾ ಅಡ್ಡೆಗಳೆಂಬ ಅಪಖ್ಯಾತಿ ಪಡೆಯುತ್ತಿವೆ. ಚಾಕಲೇಟ್ ಹಾಗೂ ವೈಟ್ನರ್‌ಗಳಲ್ಲಿ ಗಾಂಜಾ ಮಿಶ್ರಣ ಮಾಡಿ ಸೇವಿಸುವಂತಹ ಅಪಾಯಕಾರಿ ಪ್ರವೃತ್ತಿಗಳು ಹೆಚ್ಚುತ್ತಿದ್ದು, ಗಾಂಜಾ ಮಾರಾಟ ಹಾಗೂ ಸೇವನೆ ನಡೆಸುವವರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಿಮ್ಮಪ್ಪ ಮಡಿವಾಳ ಸಿದ್ದಾಪುರ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಹಳ್ಳಿಗಳಲ್ಲಿನ ಅನೇಕ ಅಂಗಡಿಗಳಲ್ಲಿ ಸುಲಭವಾಗಿ ಸಾರಾಯಿ ಲಭ್ಯವಾಗುತ್ತಿದ್ದು, ಇದರಿಂದ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಕುಟುಂಬಗಳಲ್ಲಿ ನೋವು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಸರ್ಕಾರ ಬದಲಾದ ಬಳಿಕ ಪೊಲೀಸ್ ಇಲಾಖೆಯ ಕಾರ್ಯವೈಖರಿಯೂ ಬದಲಾಗಿರುವುದಾಗಿ ಆರೋಪಿಸಿದ ಅವರು, ಶಾಸಕ ಭೀಮಣ್ಣ ನಾಯ್ಕ ಅಕ್ರಮ ಸಾರಾಯಿ ಮತ್ತು ಗಾಂಜಾ ಮಾರಾಟ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಕೊರತೆ ಇದ್ದು, ಶಾಸಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದರು.

ಉಷಾ ಹೆಗಡೆ ಮಾತನಾಡಿ, ಅಕ್ರಮ ಸಾರಾಯಿ ಮಾರಾಟ ಹಾಗೂ ಗಾಂಜಾ ಹಾವಳಿ ಮಿತಿಮೀರಿದ್ದು, ವಿದ್ಯಾರ್ಥಿಗಳು ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುರೇಶ ನಾಯ್ಕ, ಜಿ.ಎಸ್. ಹೆಗಡೆ, ಅನಸೂಯಾ ಹೆಗಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.