ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಹನುಮಾನಲೇನ್ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಸ್ವಾಗತ,ಪ್ರಾರ್ಥನೆ ಗೀತೆಯನ್ನು ಹಾಡಲಾಯಿತು.ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರು​ಮಹಾತ್ಮ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಮತ್ತು ಭಾರತದ “ರಾಷ್ಟ್ರಪಿತ”. ಸತ್ಯ ಮತ್ತು ಅಹಿಂಸೆಯ ತತ್ವಗಳ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಇವರು, ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿದ ಮಹಾನ್ ಮಾನವತಾವಾದಿ. ಮೋಹನದಾಸ ಕರಮಚಂದ್ರ ಗಾಂಧಿಯವರು​ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ತಂದೆ ಕರಮಚಂದ್ರ ಗಾಂಧಿ ಮತ್ತು ತಾಯಿ ಪುತಲೀಬಾಯಿಯವರ ಪುತ್ರರಾಗಿ ಜನಿಸಿದರು.
ಇಂಗ್ಲೆಂಡಿನಲ್ಲಿ ಕಾನೂನು (ಬ್ಯಾರಿಸ್ಟರ್) ಶಿಕ್ಷಣವನ್ನು ಮುಗಿಸಿ ವಕೀಲರಾದರು.

​ವಕೀಲಾತಿಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಅವರು, ಅಲ್ಲಿ ಭಾರತೀಯರು ಮತ್ತು ಕಪ್ಪಗಿನ ಜನರ ಮೇಲಾಗುತ್ತಿದ್ದ ವರ್ಣಭೇದ ನೀತಿಯ ವಿರುದ್ಧ ತಮ್ಮ ಮೊದಲ ‘ಸತ್ಯಾಗ್ರಹ’ ಹೋರಾಟವನ್ನು ಆರಂಭಿಸಿದರು.
​1915 ರಲ್ಲಿ ಭಾರತಕ್ಕೆ ಮರಳಿದ ಗಾಂಧೀಜಿಯವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ನಾಯಕರಾದರು.
ಬ್ರಿಟಿಷ್ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಸಹಕರಿಸದೇ, ಅವರ ಪದಾರ್ಥಗಳು ಮತ್ತು ಶಾಲೆಗಳನ್ನು ಬಹಿಷ್ಕರಿಸುವ ಅಸಹಕಾರ ಚಳುವಳಿ ಪ್ರಾರಂಭಿಸಿದರು.
ಬ್ರಿಟಿಷರು ಉಪ್ಪಿನ ಮೇಲೆ ಹೇರಿದ್ದ ತೆರಿಗೆಯನ್ನು ವಿರೋಧಿಸಿ ಸಾಬರಮತಿಯಿಂದ ದಂಡಿ ಕರಾವಳಿಯವರೆಗೆ 240 ಮೈಲಿ ನಡೆದು ಉಪ್ಪನ್ನು ತಯಾರಿಸಿದರು. ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಎಂದು ಕರೆ ನೀಡಿ, ದೇಶದ ಜನರಿಗೆ “ಮಾಡು ಇಲ್ಲವೇ ಮಡಿ” ಎಂಬ ಸಂದೇಶ ನೀಡಿದರು.​ಹಿಂಸೆಯಿಲ್ಲದೆ ಕೇವಲ ಶಾಂತಿ ಮತ್ತು ಸತ್ಯದ ಮಾರ್ಗದಲ್ಲಿ ಹೋರಾಡಿ ಜಯ ಗಳಿಸಬಹುದು ಎಂದು ಅವರು ನಂಬಿದ್ದರು.

​ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಭಾರತದಲ್ಲೇ ತಯಾರಾದ ವಸ್ತುಗಳನ್ನು ಬಳಸಲು ಪ್ರೇರೇಪಿಸಿದರು. ಇದಕ್ಕಾಗಿ ಸ್ವತಃ ಚರಕದಿಂದ ನೂಲು ಹೂತು ಖಾದಿ ಬಟ್ಟೆ ಧರಿಸುತ್ತಿದ್ದರು.ಅಸ್ಪೃಶ್ಯತೆ ನಿವಾರಣೆ, ಮಹಿಳಾ ಸಬಲೀಕರಣ ಮತ್ತು ಐಕ್ಯತೆಗಾಗಿ ಶ್ರಮಿಸಿದರು.
​ರವೀಂದ್ರನಾಥ ಟ್ಯಾಗೋರ್ ಅವರು ಗಾಂಧೀಜಿಯವರ ಮಹೋನ್ನತ ವ್ಯಕ್ತಿತ್ವಕ್ಕೆ ಗೌರವ ಸೂಚಕವಾಗಿ “ಮಹಾತ್ಮ” (ಮಹಾನ್ ಚೇತನ) ಎಂಬ ಬಿರುದನ್ನು ನೀಡಿದರು.
​ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ಅನ್ನು ಭಾರತದಲ್ಲಿ ಗಾಂಧಿ ಜಯಂತಿಯಾಗಿ ಮತ್ತು ವಿಶ್ವದಾದ್ಯಂತ”ಅಂತರರಾಷ್ಟ್ರೀಯ ಅಹಿಂಸಾ ದಿನ”ವಾಗಿ ಆಚರಿಸಲಾಗುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಆದರ್ಶ ನಮ್ಮೆಲ್ಲರಿಗೆ ಸ್ಪೂರ್ತಿ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿದ್ದು, ಸರಳತೆ, ಪ್ರಾಮಾಣಿಕತೆ ಮತ್ತು ದೃಢತೆಗೆ ಹೆಸರಾದ ಮಹಾನ್ ನಾಯಕರು.
​ಅಕ್ಟೋಬರ್ 2, 1904 ಉತ್ತರ ಪ್ರದೇಶದ ಮುಘಲ್ ಸರಾಯ್ ದಲ್ಲಿ ಶಾರದ ಪ್ರಸಾದ್ ಮತ್ತು ರಾಮದುಲಾರಿ ದೇವಿ ಮಗನಾಗಿ ಜನಿಸಿದರು.

​​ಮಹಾತ್ಮ ಗಾಂಧಿಯವರ ಪ್ರಭಾವದಿಂದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು.​ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜೈಲುವಾಸ ಅನುಭವಿಸಿದರು.
​​ಸ್ವಾತಂತ್ರ್ಯದ ನಂತರ ರೈಲ್ವೆ ಸಚಿವರಾಗಿ, ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ರೈಲ್ವೆ ಅಪಘಾತವೊಂದರ ನೈತಿಕ ಹೊಣೆ ಹೊತ್ತು ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರ ಪ್ರಾಮಾಣಿಕತೆ ಇತಿಹಾಸದಲ್ಲಿ ಪ್ರಸಿದ್ಧವಾಗಿದೆ.
​ಜವಾಹರಲಾಲ್ ನೆಹರು ಅವರ ನಿಧನದ ನಂತರ 1964ರ ಜೂನ್ 9ರಿಂದ 1966ರ ಜನವರಿ 11ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಿದರು.​1965ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದರು.
​”ಜೈ ಜವಾನ್, ಜೈ ಕಿಸಾನ್” ಎಂಬ ಪ್ರಸಿದ್ಧ ಘೋಷಣೆಯನ್ನು ಮೊದಲು ಮೊಳಗಿಸಿದರು. ಇದು ಸೈನಿಕರಿಗೆ ಮತ್ತು ರೈತರಿಗೆ ಗೌರವ ಸಲ್ಲಿಸಿತು.
​ದೇಶದಲ್ಲಿ ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಗೆ (ಹಾಲಿನ ಉತ್ಪಾದನೆ) ಉತ್ತೇಜನ ನೀಡಿದರು.
​​ಜನವರಿ 11, 1966ರಂದು ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ನಲ್ಲಿ ನಿಧನರಾದರು. ​ಇವರ ಸಮಾಧಿ ಸ್ಥಳವನ್ನು ‘ವಿಜಯ್ ಘಾಟ್’ ಎಂದು ಕರೆಯಲಾಗುತ್ತದೆ. ​ಮರಣೋತ್ತರವಾಗಿ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಯಿತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿಯಾದ ನಾಗರತ್ನಾ ಮೊಗೇರ, ಅನಿಸ್ ಫಾತೀಮಾ, ಸುನೀತಾ ಆರ್,ಸಂಜನಾ ಮಿರಾಶಿ ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿ ಸಹಕಾರ ನೀಡಿದರು. ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು ನಡೆದವು. ಕೊನೆಯಲ್ಲಿ ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.