ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜಿ.ಟಿ.ನಾಯ್ಕ ಅಧಿಕಾರ ಸ್ವೀಕರಿಸಿದರು. ಶಿರಸಿಯ ಅಂಬೇಡ್ಕರ್ ಭವನದಲ್ಲಿ ಕಿಕ್ಕಿರಿದು ತುಂಬಿದ ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಗಾರದ ನಡುವೆ ನಿಕಟ ಪೂರ್ವ ಅಧ್ಯಕ್ಷ ಸಾಯಿ ಗಾಂವ್ಕರ್ ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ಡಿಸಿಸಿ ವಕ್ತಾರ ಶಂಭು ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.

ಶಾಸಕ ಭೀಮಣ್ಣ ಟಿ.ನಾಯ್ಕ ಜಿಲ್ಲೆಯಲ್ಲಿ ಹೊಸ ಯುಗ ಪ್ರಾರಂಭವಾಗುತ್ತಿದೆ.‌ ನೂತನ ಜಿಲ್ಲಾಧ್ಯಕ್ಷರಾದ ಜಿ.ಟಿ.ನಾಯ್ಕರಿಗೆ ಶುಭ‌ ಕೋರುತ್ತೇನೆ. ,ಜಿಲ್ಲೆಯ 14 ಕಾಂಗ್ರೆಸ್ ಘಟಕಗಳು ಪ್ರಬಲವಾಗಿವೆ .ಇನ್ನಷ್ಟು ಘಟಕಗಳು ಬಲಗೊಳ್ಳಲಿ. ಪಕ್ಷ ಸದೃಢವಾಗಲು ಕಾರ್ಯಕರ್ತರು ಮುಖ್ಯ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು. ಹಿಂದೆ ನಾವು ನಾಲ್ಕು ಶಾಸಕ ಸ್ಥಾನ ಗೆದ್ದಿದ್ದೇವೆ. ಮುಂದೆ ದೊಡ್ಡ ಗುರಿ ಇದೆ. ಎಲ್ಲರಿಗೂ ಪಕ್ಷ ಕಟ್ಟುವ ಜವಾಬ್ದಾರಿ ಇದೆ.‌ಪಂಚಾಯತ್ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆ ಬರಲಿವೆ. ಈಗ ಸಂಘಟನೆ ಮುಖ್ಯ. ಸಂಘಟನೆ ಇದ್ದರೆ, ಚುನಾವಣೆ ಎದುರಿಸುವುದು ಸುಲಭ. ಮಾಜಿ ಸಿಎಂ ಸಿದ್ದರಾಮಯ್ಯ , ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಐದು ಗ್ಯಾರಂಟಿ ಕೊಟ್ಟಿದ್ದಾರೆ. ಅವುಗಳನ್ನು ಜನರಿಗೆ ಹೇಳಬೇಕು ‌‌ಸರ್ಕಾರಿ ಬಸ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಕೊಟ್ಟಿದ್ದಾರೆ. ಇದನ್ನು ನಾವು ಜನರಿಗೆ ತಿಳಿಸಿ ಹೇಳಬೇಕು ಎಂದರು‌ .

*ಬಿಜೆಪಿ ವಿರುದ್ಧ ವಾಗ್ದಾಳಿ:*
ಅತಿಕ್ರಮಣ ಭೂಮಿಯಲ್ಲಿ ಮನೆಗೆ ಸರ್ಕಾರ ಪಟ್ಟಾ ಕೊಡುತ್ತಿಲ್ಲ ಎಂದು ಪ.ಪಂಚಾಯತ ಮಟ್ಟಕ್ಕೆ ಹೋಗಿ ಕೆನರಾ ಸಂಸದ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಇಂತಹ ಸುಳ್ಳು ಹೇಳುತ್ತಲೇ ಬಂದಿದೆ. ಕೇಂದ್ರ ಸರ್ಕಾರ ಅತಿಕ್ರಮಣ ಭೂಮಿಯಲ್ಲಿನ ಮನೆ ಕಿತ್ತು ಬಿಸಾಕಿ ಎಂದು ಆದೇಶ ಹೊರಡಿಸಿದೆ . ಈ ಸತ್ಯವನ್ನು ಸಂಸದ ಯಾಕೆ ಹೇಳುತ್ತಿಲ್ಲ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ ಅತಿಕ್ರಮಣದ ಒಂದೇ ಒಂದು ಮನೆ ಕಿತ್ತರೂ ನಾನು ಸುಮ್ಮನಿರಲ್ಲ ಎಂದು ಹೇಳಿದರು. ನನ್ನ ಹಾಗೆ ನೀವು ಹೇಳಿ ನೋಡೋಣ ಎಂದು ಸಂಸದ ಕಾಗೇರಿಗೆ ಸವಾಲು ಹಾಕಿದರು. ಹಳ್ಳಿಗಳು ಅರಣ್ಯದ ಅಂಚಿಗೆ ಇವೆ. ಅರಣ್ಯದಲ್ಲೇ ಬದುಕಿಗಾಗಿ ಮನೆ ಕಟ್ಟಿದ್ದಾರೆ. ಇವುಗಳನ್ನು ತಾಕತ್ತಿದ್ದರೆ ತೆಗೆಸಿ ನೋಡೋಣ ಎಂದು ಶಾಸಕ ಭೀಮಣ್ಣ ಸವಾಲು ಹಾಕಿದರು.

ಶಾಸಕ ಸತೀಶ್ ಸೈಲ್ ಮಾತನಾಡಿ ಇವತ್ತಿನ ಸಮಾರಂಭದಲ್ಲಿ ಕಾಂಗ್ರೆಸ್ ಬಲ ಗೊತ್ತಾಗಿದೆ. ಒಗ್ಗಟ್ಟು ಸಹ ಕಂಡಿದೆ‌ . ಪಕ್ಷ ಅಂದ ಮೇಲೆ ತಗ್ಗಿ ಬಗ್ಗಿ ನಡೆಯಬೇಕಾಗುತ್ತದೆ ಎಂದರು‌. ಪಕ್ಷದಲ್ಲಿ ಮಿತ್ರರು ಶತ್ರುಗಳು ಇರ್ತಾರೆ. ಶತೃ ಇದ್ದಾಗಲೇ ನಾವು ಜಾಗೃತರಾಗಿ ಇರ್ತೇವೆ ಎಂದರು.
ವೇದಿಕೆಯಲ್ಲಿ ಶಿರಸಿ ಸಿದ್ದಾಪುರ ಶಾಸಕ ಭೀಮಣ್ಣ‌ ನಾಯ್ಕ, ಕಾರವಾರ ಶಾಸಕ ಸತೀಶ್ ಸೈಲ್, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮಾರೋಳ್ಳಿ, ಮಾಜಿ ಶಾಸಕ ವಿ.ಎಸ್. ಪಾಟೀಲ್ ,ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್ ಧುರೀಣರಾದ ರಾಮಾ ಮೋಗೇರಾ, ನಾಗರಾಜ ನಾರ್ವೇಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾರದಾ ರಾಠೋಡ್ , ಆರ್.ಎಚ್ ,ನಾಯ್ಕ,ಜ್ಯೋತಿ ಪಾಟೀಲ್,
ಸುಶ್ಮಾ ರಾಜಗೋಪಾಲ್, ಸೇರಿದಂತೆ ಪಕ್ಷದ ನೂರಾರು ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು‌ .