ಸುದ್ದಿ ಕನ್ನಡ ವಾರ್ತೆ
ಸಾರ್ವಜನಿಕರ ಆರೋಗ್ಯ ರಕ್ಷಣೆಯ ನೆಪವೊಡ್ಡಿ ಕರ್ನಾಟಕ ರಾಜ್ಯ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರಿರುವ ಕ್ರಮವು, ಲಕ್ಷಾಂತರ ಅಡಿಕೆ ಬೆಳೆಗಾರರ ಮತ್ತು ಕಾನೂನುಬದ್ಧ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಹೊಡೆಯುವ ನಿರ್ಧಾರ ಇದಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರದ ಈ ರೀತಿಯ ನಡೆಯಿಂದಾಗಿ ಅಡಿಕೆ ಬೆಳೆಯನ್ನೇ ನಂಬಿ ಬದುಕುತ್ತಿರುವ ಕೃಷಿಕರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ.ಅಡಿಕೆಯು ಕರ್ನಾಟಕ ಹಾಗೂ ದೇಶದ ಲಕ್ಷಾಂತರ ಕೃಷಿಕ ಕುಟುಂಬಗಳ ಜೀವನಾಡಿಯಾದ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ತಂಬಾಕು ಮತ್ತು ನಿಕೋಟಿನ್ನಂತಹ ಹಾನಿಕಾರಕ ಅಂಶಗಳನ್ನು ಒಳಗೊಂಡ ನಿಷೇಧಿತ ಉತ್ಪನ್ನಗಳ ಸಾಲಿನಲ್ಲಿ ಕೃಷಿ ಉತ್ಪನ್ನವಾದ ಅಡಿಕೆಯನ್ನು ಸೇರಿಸಿ, ಸರ್ಕಾರವು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ತೀವ್ರ ಖಂಡನೀಯ.
ಈಗಾಗಲೇ ಹವಾಮಾನ ವೈಪರೀತ್ಯ ಹಾಗೂ ರೋಗಬಾಧೆಯಿಂದ ಕಂಗಾಲಾಗಿರುವ ರೈತರಿಗೆ ರಾಜ್ಯ ಸರ್ಕಾರದ ಈ ಕ್ರಮವು ‘ಗಾಯದ ಮೇಲೆ ಬರೆ ಎಳೆದಂತಾಗಿದೆ’. ಹಾಗೆಯೇ, ಕೇವಲ ಇದನ್ನೇ ನಂಬಿ ಬದುಕುತ್ತಿರುವ ಸಣ್ಣ ಸಣ್ಣ ವ್ಯಾಪಾರಸ್ಥರಿಗೂ ಸಹ ಭಾರಿ ತೊಂದರೆ ಆಗಿದೆ
ಈಗಾಗಲೇ ಗುಟ್ಕಾ ನಿಷೇಧ ಜಾರಿಯಲ್ಲಿದ್ದು, ಈಗ ಪಾನ್ ಮಸಾಲಾವನ್ನೂ ನಿಷೇಧಿಸಿರುವುದು ರೈತರ ಮೇಲಿನ ಗದಾ ಪ್ರಹಾರ ವಾಗಿದೆ.
ಆರೋಗ್ಯ ರಕ್ಷಣೆಯ ನಿಯಮಗಳನ್ನು ಜಾರಿಗೆ ತರುವಾಗ, ಅಡಿಕೆ ಬೆಳೆಯುವ ರೈತರಿಗೆ ಮತ್ತು ವ್ಯಾಪಾರಿಗಳ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಜಾಗ್ರತೆ ವಹಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿತ್ತು.
ಆದ್ದರಿಂದ, ರಾಜ್ಯ ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡು ತಂಬಾಕು ಉತ್ಪನ್ನಗಳು ಮತ್ತು ಸಕ್ರಮ ಅಡಿಕೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಬೇಕು. ಅಡಿಕೆ ಬೆಳೆಗಾರರಿಗೆ, ಅದರ ಸಾಗಾಣಿಕೆಗೆ ಹಾಗೂ ಕಾನೂನುಬದ್ಧ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಯಾಗದಂತೆ ತಕ್ಷಣವೇ ಸ್ಪಷ್ಟವಾದ ನಿಯಮಾವಳಿಗಳನ್ನು ರೂಪಿಸಬೇಕು. ರಾಜ್ಯದ ಲಕ್ಷಾಂತರ ರೈತ ಕುಟುಂಬಗಳ ಜೀವನಾಧಾರ ವಾಗಿರುವ ಅಡಿಕೆ ಬೆಳೆ ಹಾಗೂ ಸಕ್ರಮ ವ್ಯಾಪಾರಿಗಳ ಹಿತರಕ್ಷಣೆಗೆ ಸರ್ಕಾರವು ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕುಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ.
