ಸುದ್ದಿ ಕನ್ನಡ ವಾರ್ತೆ
ಭಟ್ಕಳ ತಾಲ್ಲೂಕಿನ ಶಿರಾಲಿಯ ಹೆಮ್ಮೆಯ ಚೇತನ, ‘ಬಡವರ ಬಂಧು’ ಎಂದೇ ಜನಪ್ರಿಯರಾಗಿದ್ದ ವೈದ್ಯರು ಹಾಗೂ ಹಿರಿಯ ಸಾಹಿತಿಗಳಾದ ಡಾ. ಆರ್. ವಿ. ಸರಾಫ್ (ರಮೇಶ್ ಸರಾಫ್) ಅವರ ನಿಧನದ ವಾರ್ತೆ ತೀವ್ರ ಆಘಾತವನ್ನುಂಟು ಮಾಡಿದೆ.ಎಂದು ಉತ್ತರ ಕನ್ನಡ ಜಿಲ್ಲಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಂಬನಿ ಮಿಡಿದಿದ್ದಾರೆ.
ಡಾಕ್ಟರ್ ಅವರು ಕೇವಲ ರೋಗಿಗಳಿಗೆ ಗುಣಪಡಿಸುವ ವೈದ್ಯರಷ್ಟೇ ಆಗಿರದೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಭಟ್ಕಳ ತಾಲ್ಲೂಕಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ಸಾಧಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದುದು. ಮಕ್ಕಳ ಯಕ್ಷಗಾನ, ಬೇಸಿಗೆ ಶಿಬಿರಗಳ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದ ಅವರ ಸರಳ ಹಾಗೂ ಸೃಜನಶೀಲ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾದರಿಯಾಗಿದೆ.
ನಮ್ಮ ಕ್ಷೇತ್ರದ ಒಬ್ಬ ಸತ್ಪ್ರಜೆಯನ್ನು, ಹಿರಿಯ ಮಾರ್ಗದರ್ಶಕರನ್ನು ಕಳೆದುಕೊಂಡು ಇಂದು ನಾವೆಲ್ಲರೂ ದುಃಖಿತರಾಗಿದ್ದೇವೆ. ಭಗವಂತನು ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ, ಹಾಗೂ ಇಡೀ ಕುಟುಂಬ ವರ್ಗ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ಈ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.ಓಂ ಶಾಂತಿಃ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ. ಸಂಸದರು ಉತ್ತರ ಕನ್ನಡ ಅವರು ದುಃಖ ವ್ಯಕ್ತ ಪಡಿಸಿದ್ದಾರೆ.
