ಸುದ್ದಿ ಕನ್ನಡ ವಾರ್ತೆ
ಶಿರಸಿ: ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾನಿಲಯವು ನಡೆಸಿದ ಸಂಯೋಜಿತ ಕಾನೂನು ಪದವಿಯ (ಬಿಎ, ಎಲ್ಎಲ್ಬಿ-ಆನರ್ಸ್) ಪರೀಕ್ಷೆಯಲ್ಲಿ ಶಿರಸಿ ಮೂಲದ ಚಿನ್ಮಯಿ ಹೆಗಡೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಐದು ವರ್ಷದ 2021-26ರ ಬ್ಯಾಚ್‌ನಲ್ಲಿ ಅತಿಹೆಚ್ಚು ಅಂಕ ಪಡೆದ ಚಿನ್ಮಯಿ ಹೆಗಡೆ ಬಂಗಾರದ ಪದಕ ಪಡೆದಿದ್ದಾಳೆ. ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ರಂಜನ್ ಬ್ಯಾನರ್ಜಿ ಪದವಿ ಪ್ರದಾನ ಮಾಡಿದರು. ಇವರು ಹಿರಿಯ ಪತ್ರಕರ್ತ ಭಾಸ್ಕರ ಹೆಗಡೆ ಮತ್ತು ರಸಾಯನ ಶಾಸ್ತ್ರ ಉಪನ್ಯಾಸಕಿ ಶಶಿಕಲಾ ಹೆಗಡೆ ಅವರ ಪುತ್ರಿ. ಶಿರಸಿ ತಾಲೂಕಿನ ಸೋಮಸಾಗರ-ಬಪ್ಪನಳ್ಳಿ ಮೂಲದವರು.
ಕಾನೂನು ಪದವಿ ಓದುತ್ತಿರುವಾಗ ಚಿನ್ಮಯಿ ಹೆಗಡೆ ಬರೆದ ಶೈಕ್ಷಣಿಕ ಪ್ರಬಂಧವೊಂದು, Intellectual Property Right Act ಕುರಿತ ಪುಸ್ತಕದ ಅಧ್ಯಾಯವಾಗಿದೆ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಕೆಳಗೆ ವೃತ್ತಿ ತರಬೇತಿ (Internship) ಯನ್ನು ಮುಗಿಸಿ ವಿಶ್ವವಿದ್ಯಾನಿಲಯಕ್ಕೆ ಕೀರ್ತಿ ತಂದಿದ್ದಾಳೆ ಎಂದು ಪದವಿ ದೀಕ್ಷಾಂತ ಸಮಾರಂಭದಲ್ಲಿ ಪಿಇಎಸ್ ಕಾನೂನು ವಿಭಾಗ ಹೇಳಿದೆ. ಲಂಡನ್‌ನ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್-ನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಚಿನ್ಮಯಿ ಹೆಗಡೆ ಈಗ ಆಯ್ಕೆಯಾಗಿರುವುದು ಸಹ ಗಮನಾರ್ಹ ಸಾಧನೆಯಾಗಿದೆ.
