ಸುದ್ದಿ ಕನ್ನಡ ವಾರ್ತೆ
​ಅಂಕೋಲಾ: ಹುಲಿ ಗಣತಿ ಕಾರ್ಯಕ್ಕಾಗಿ ಅರಣ್ಯದಲ್ಲಿ ಅಳವಡಿಸಲಾಗಿದ್ದ ಎರಡು ಕ್ಯಾಮೆರಾಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.

​ಹಿಲ್ಲೂರು ಗ್ರಾಮದ ಕೊಳಗಿಯ ದುರ್ಗಾ ದೇವ್ ಹರಿಕಂತ್ರ (53) ಬಂಧಿತ ಆರೋಪಿ. ಈತನಿಂದ ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಎರಡು ಕ್ಯಾಮೆರಾ ವಶಕ್ಕೆ ಪಡೆಯಲಾಗಿದೆ.
​ಸಿಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ, ಅಪರಾಧ ಪತ್ತೆ ದಳದ ಸಿಬ್ಬಂದಿ ಮಾದೇವ ಸಿದ್ದಿ, ಪ್ರಶಾಂತ ನಾಯ್ಕ, ಭಗವಾನ್ ಗಾಂವಕರ, ಆಸೀಫ್ ಕುಂಕುರ, ಗಿರೀಶ ಲಮಾಣಿ ಕಾರ್ಯಾಚರಣೆಯಲ್ಲಿದ್ದರು.

​ಮೇ 1ರಿಂದ 25ರ ವರೆಗೆ ನಡೆದ ಅಖಿಲ ಭಾರತ ಹುಲಿ ಗಣತಿ (ಆಲ್ ಇಂಡಿಯಾ ಟೈಗರ್ ಎಸ್ಟಿಮೇಶನ್) ಕಾರ್ಯಾಚರಣೆಯ ಅಂಗವಾಗಿ ಹೊಸಕಂಬಿ ವಲಯದ ಮಾಣಿಕಾರ-ತಿಂಗಳಬೈಲ್ ಅರಣ್ಯ ಪ್ರದೇಶದಲ್ಲಿ ಎರಡು ಕ್ಯಾಮೆರಾ ಅಳವಡಿಸಲಾಗಿತ್ತು. ಅರಣ್ಯ ಸಿಬ್ಬಂದಿ ಪ್ರತಿ ಐದು ದಿನಗಳಿಗೊಮ್ಮೆ ಮೆಮೊರಿ ಕಾರ್ಡ್ ಬದಲಾಯಿಸಿ, ಅದರಲ್ಲಿ ದಾಖಲಾಗಿದ್ದ ಮಾಹಿತಿಯನ್ನು ರೇಂಜ್ ಅರಣ್ಯ ಕಚೇರಿಯ ಕಂಪ್ಯೂಟರ್‌ಗೆ ವರ್ಗಾಯಿಸುತ್ತಿದ್ದರು.

​ಮೇ 11 ರಂದು ಕೊನೆಯದಾಗಿ ಡೇಟಾ ಸಂಗ್ರಹಣೆ ನಡೆಸಲಾಗಿತ್ತು. ಮೇ 12 ರಂದು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾಗ ಕ್ಯಾಮೆರಾ ಅಲ್ಲಿಯೇ ಇತ್ತು. ಆದರೆ, ಮೇ 13 ರಂದು ಕರ್ತವ್ಯಕ್ಕೆ ಹೋದ ಸಿಬ್ಬಂದಿಗೆ ಕ್ಯಾಮೆರಾ ನಾಪತ್ತೆಯಾಗಿದ್ದು ಗೊತ್ತಾಗಿತ್ತು. ಎಲ್ಲ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು.
​ಸುಮಾರು 50 ಸಾವಿರ ಮೌಲ್ಯದ ಎರಡು ಕ್ಯಾಮೆರಾ ಕಾಣೆಯಾದ ಬಗ್ಗೆ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಗುರುರಾಜ ಜಿರಗಾಳೆ ದೂರು ನೀಡಿದ್ದರು. ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.