ಸುದ್ದಿ ಕನ್ನಡ ವಾರ್ತೆ

ಅಖಿಲ ಹವ್ಯಕ ಮಹಾಸಭೆಯ ವತಿಯಿಂದ ಡಿಸೆಂಬರ್ 20ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹವ್ಯಕ ಮಹಿಳಾ ಸಮಾವೇಶ ಆಯೋಜಿಸಲಾಗಿದೆ ಮಹಾಸಭೆಯ 83ನೇ ವರ್ಷದ ಸಂಭ್ರಮದ ಅಂಗವಾಗಿ ದೇಶ-ವಿದೇಶಗಳಲ್ಲಿಸೇರಿ ಒಟ್ಟು 83 ಹವ್ಯಕ ಮಹಿಳಾ ವೇದಿಕೆಗಳನ್ನು ಸ್ಥಾಪಿಸಲಾಗುವುದು ಎಂದು ಮಹಾಸಭೆಯ ಅಧ್ಯಕ್ಷ ಹಾಗೂ ಖ್ಯಾತ ವೈದ್ಯ ಡಾ. ಗಿರಿಧರ ಕಜೆ ತಿಳಿಸಿದರು.
ನಗರದ ಪೂಗಭವನದಲ್ಲಿ ಭಾನುವಾರ ಹವ್ಯಕ ಮಹಾಸಭೆಯ ಮಹಿಳಾ ವೇದಿಕೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾಸಭೆಯ 83ನೇ ವರ್ಷದ ಅಂಗವಾಗಿ 83 ಮಹಿಳಾ ವೇದಿಕೆಗಳನ್ನು ಆರಂಭಿಸಲಾಗುತ್ತಿದೆ. ಅವುಗಳಲ್ಲಿ ಎಂಟು ವಿದೇಶಗಳಲ್ಲಿ, ಎಂಟು ಹೊರರಾಜ್ಯಗಳಲ್ಲಿ ಹಾಗೂ ಉಳಿದವು ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾರ್ಯಾರಂಭ ಮಾಡಲಿವೆ. ಈಗಾಗಲೇ 18 ಪ್ರಾಂತ್ಯಗಳ ಮಹಿಳಾ ವೇದಿಕೆಗಳು ಉದ್ಘಾಟನೆಗೊಂಡಿರುತ್ತವೆ. ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶಗಳಿಗೆ ಆದ್ಯತೆ ನೀಡಿ ಮುಂದಿನ ಎರಡು ತಿಂಗಳೊಳಗೆ ಉಳಿದ ಎಲ್ಲ ವೇದಿಕೆಗಳನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಹವ್ಯಕ ಸಮಾಜ ಸಂಸ್ಕೃತಿ, ಸಂಸ್ಕಾರ ಮತ್ತು ಶ್ರೇಷ್ಠ ಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಸದಾ ಮುಂಚೂಣಿಯಲ್ಲಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿಯನ್ನು ಎಲ್ಲರೂ ಹೊತ್ತುಕೊಳ್ಳಬೇಕೆಂದು ಅವರು ವಿನಂತಿಸಿದರು.