ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಬೇಡ್ತಿ, ವರದಾ ಮತ್ತು ಅಘನಾಶಿನಿ ನದಿ ಜೋಡಣೆಯನ್ನು ಕೈಬಿಡುವಂತೆ ಆಗ್ರಹಿಸಿ ನವೆಂಬರ 3 ರಂದು ಬೆಳಿಗ್ಗೆ 10 ಗಂಟೆಗೆ ಯಲ್ಲಾಪುರ ದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ಈ ನದಿಗಳನ್ನು ತಿರುಗಿಸಿ ಬಯಲು ಸೀಮೆಗೆ ನೀರು ಬೃಹತ್ ನದಿ ಜೋಡಣೆ ಯೋಜನೆಯನ್ನು ಸರ್ಕಾರಗಳು ಕೈಗೊಳ್ಳುತ್ತಿವೆ. ಇಂದಿನ ಕೃಷಿ, ಪರಿಸರ, ನೀರಿನ ಲಭ್ಯತೆ, ಹಾಗೂ ಜನಜೀವನಕ್ಕೆ ಇದು ಮಾರಕವಾಗಿದೆ.
ಜಿಲ್ಲೆಯ ಪರಿಸರ ಹಾಗೂ ಜನಜೀವನವು ಈಗಾಗಲೇ ಹಲವಾರು ಬೃಹತ್ ವಿನಾಶಕಾರಿ ಯೋಜನೆಗಳಿಂದ ನಲುಗಿದೆ. ಆದರೂ ಸಹ ಹೊಸ ಯೋಜನೆಗಳು ಪ್ರಸ್ತಾಪವಾಗುತ್ತಲೇ ಇವೆ. ಯೋಜನೆ ವಿರೋಧಿಸಿ ಕಳೆದ ಒಂದು ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯ ಎಲ್ಲೆಡೆ ಈ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಜನ ಸಮಾವೇಶ, ಪಾದಯಾತ್ರೆ, ವಿಜ್ಞಾನಿಗಳ ವಿಚಾರಗೋಷ್ಠಿ, ಮನವಿ ಸಲ್ಲಿಕೆ, ಪತ್ರ ಚಳುವಳಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖರಿಗೆ ಮನವಿ ಸಲ್ಲಿಕೆ, ಇವೆಲ್ಲವೂ ಹೋರಾಟದ ಭಾಗವಾಗಿಯೇ ನಡೆದಿದೆ.
ಪಕ್ಷ ,ಜಾತಿ, ಧರ್ಮಾತೀತವಾಗಿ ಜಿಲ್ಲೆಯ ಜನರು ಹೋರಾಟಕ್ಕೆ ಬೆಂಬಲ ನೀಡಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸರ್ಕಾರಗಳು ಮಾತ್ರ ಈ ಯೋಜನೆಯನ್ನು ಮುಂದುವರಿಸುತ್ತಿವೆ. ಬೇಡ್ತಿ, ವರದಾ, ನದಿ ತಿರುವು ಯೋಜನೆಯಂತೂ DPR ಹಂತ ತಲುಪಿದ್ದು ಇದೀಗ ಯೋಜನೆಯ ಸ್ಥಳ ಸರ್ವೆ ಮಾಡಲು ಖಾಸಗಿ ಕಂಪನಿಯೊಂದಕ್ಕೆ ಟೆಂಡರ್ ಕೂಡ ನೀಡಲಾಗಿದೆ.
ಹೀಗಾಗಿ ಜಿಲ್ಲೆಯ ಜನರ ಬದುಕಿನ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಜಿಲ್ಲೆಯ ಜನ ಜಿಲ್ಲೆಗಾಗಿ ಒಗ್ಗಟ್ಟಾಗಲೇಬೇಕಾದ ಅನಿವಾರ್ಯ ಸಂದರ್ಭ ಇದು. ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪರಿಸರ ಹಾಗೂ ಜನ ವಿರೋಧಿ ಆದ ಈ ವಿನಾಶಕಾರಿ ಯೋಜನೆಗಳನ್ನು ಕೈಬಿಡಬೇಕೆಂದು ಹಕ್ಕು ದ ಸ್ಪಷ್ಟ ಸಂದೇಶವನ್ನು ಕಳುಹಿಸಲು ನವೆಂಬರ್ ಮೂರರಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ತಡೆ ಹಮ್ಮಿಕೊಳ್ಳಲಾಗಿದೆ.
ರಸ್ತೆ ತಡೆಗೆ ಹಳ್ಳಿ ಹಳ್ಳಿಗಳಿಂದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗೆ ಆಗಮಿಸುವ ನಿರೀಕ್ಷೆ ಇದೆ. ಉತ್ತರ ಕನ್ನಡ ಜಿಲ್ಲೆಗೆ ಮಾರಕವಾಗಿರುವ ಈ ಯೋಜನೆಗಳ ವಿರುದ್ಧ ಜನ ಒಗ್ಗಟ್ಟಾಗಿದ್ದಾರೆ.
