ಸುದ್ದಿ ಕನ್ನಡ ವಾರ್ತೆ
ಕುಮಟಾ:ತಾಲೂಕಿನ ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಆಕಾಶ ಹರಿಕಂತ್ರ ಅವರು ಜಪಾನ್ ಸರ್ಕಾರದ ಪ್ರತಿಷ್ಠಿತ ಸಕುರಾ ಸೈನ್ಸ್ ಸ್ಟೂಡೆಂಟ್ ಎಕ್ಸ್ಚೇಂಜ್ ಪ್ರೋಗ್ರಾಂ ಅಡಿಯಲ್ಲಿ ಆಯ್ಕೆಯಾಗಿ ಜಪಾನ್‌ಗೆ ಭೇಟಿ ನೀಡಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಅನುಭವ ಪಡೆದಿದ್ದಾರೆ.

ಕೊಡ್ಕಣಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವ ಆಕಾಶ, ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಸ್.ಎಸ್.ಎಲ್.ಸಿ. ಯಲ್ಲಿ 621 ಅಂಕಗಳನ್ನು ಗಳಿಸಿದ್ದರು. ಈ ಸಾಧನೆಯ ಆಧಾರದ ಮೇಲೆ ಕರ್ನಾಟಕದಿಂದ ಆಯ್ಕೆಯಾದ ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಜಪಾನ್ ಪ್ರವಾಸದ ಅವಕಾಶ ಪಡೆದಿದ್ದಾರೆ.

ಮೇ 23ರಿಂದ 30ರವರೆಗೆ ನಡೆದ ಈ ಶೈಕ್ಷಣಿಕ ಪ್ರವಾಸದಲ್ಲಿ ಜಪಾನ್‌ನ ಪ್ರಮುಖ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು, ರಿಕೆನ್, ಮಿರಾಕನ್ ಹಾಗೂ ಸ್ಪೇಸ್ ಸೆಂಟರ್‌ಗಳಿಗೆ ಭೇಟಿ ನೀಡಿ ಕೃತಕ ಬುದ್ದಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ತಿಳಿದುಕೊಂಡರು. ಪ್ರವಾಸದ ಸಂಪೂರ್ಣ ವೆಚ್ಚವನ್ನು ಜಪಾನ್ ಸರ್ಕಾರವೇ ಭರಿಸಿತ್ತು.
ಜಪಾನ್‌ನ ವಿಜ್ಞಾನ, ತಂತ್ರಜ್ಞಾನ, ಶಿಸ್ತು, ಸಮಯಪ್ರಜ್ಞೆ ಹಾಗೂ ಸಂಸ್ಕೃತಿ ತಮ್ಮ ಮೇಲೆ ಆಳವಾದ ಪ್ರಭಾವ ಬೀರಿದ್ದು, ಈ ಅನುಭವವನ್ನು ಮುಂದಿನ ವಿದ್ಯಾಭ್ಯಾಸ ಹಾಗೂ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ಆಕಾಶ ಹರಿಕಂತ್ರ ತಿಳಿಸಿದ್ದಾರೆ.

ಆಕಾಶ ಅವರ ಸಾಧನೆ ಗ್ರಾಮೀಣ ಭಾಗದ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಜಾಗತಿಕ ಮಟ್ಟದ ಅವಕಾಶಗಳನ್ನು ಸಾಧನೆಯ ಮೂಲಕ ಪಡೆಯಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.