ಸುದ್ದಿ ಕನ್ನಡ ವಾರ್ತೆ
ಶಿರಸಿ: ಭಗವಂತನ ಮೇಲೆ ಅಚಲ ಭಕ್ತಿಯನ್ನು ಬೆಳೆಸಿಕೊಳ್ಳಲು ಸತ್ಯನಾರಾಯಣ ಕಥೆಯನ್ನು ಶ್ರವಣ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಆಷಾಢ ಮಾಸದ ಶುಕ್ಲ ಪಕ್ಷದ ಪವಿತ್ರ ಏಕಾದಶಿ (ವಿಷ್ಣು ಶಯನೋತ್ಸವ) ಅಂಗವಾಗಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆದ ಶ್ರೀ ಸತ್ಯನಾರಾಯಣ ವ್ರತ ಪ್ರವಚನವನ್ನು ನಡೆಸಿಕೊಟ್ಟರು.
ಸತ್ಯನಾರಾಯಣ ವ್ರತವು ಕೇವಲ ಒಂದು ಆಚರಣೆಯಲ್ಲ; ಮನುಷ್ಯನ ಜೀವನದಲ್ಲಿ ಸತ್ಯ, ಶ್ರದ್ಧೆ ಹಾಗೂ ಭಕ್ತಿಯ ಮಹತ್ತ್ವವನ್ನು ಬೋಧಿಸುವ ದಿವ್ಯ ಮಾಧ್ಯಮವಾಗಿದೆ ಎಂದು ಅವರು ಪ್ರವಚನದಲ್ಲಿ ಹೇಳಿದರು. ಶ್ರೀ ಸತ್ಯನಾರಾಯಣ ಸ್ವಾಮಿಯ ಲೀಲೆಗಳು ಹಾಗೂ ವ್ರತ ಮಹಿಮೆಯನ್ನು ಆಧ್ಯಾತ್ಮಿಕ ನೆಲೆಯಲ್ಲಿ ಮನೋಜ್ಞವಾಗಿ ವಿವರಿಸಿದರು.
ವಿಷ್ಣುವು ಯೋಗನಿದ್ರೆಗೆ ತೆರಳುವ ಈ ಪವಿತ್ರ ದಿನದ ಅಂಗವಾಗಿ ಶ್ರೀಮಠದ ಸಂಪ್ರದಾಯದಂತೆ ಶ್ರೀ ಸತ್ಯನಾರಾಯಣ ಪೂಜೆಯನ್ನು ವೈದಿಕ ವಿಧಿ-ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗುತ್ತದೆ.
ಇದಕ್ಕೂ ಮುನ್ನ ಮಠದ ವೈದಿಕ ವೃಂದದ ವೇದಘೋಷ, ಮಂಗಳವಾದ್ಯಗಳ ನಡುವೆ ವಿಶೇಷ ಅರ್ಚನೆ ಹಾಗೂ ಮಹಾಮಂಗಳಾರತಿ ನಡೆಯಿತು. ಶ್ರೀ ಅನಂದಾನೀಶೇಂದ್ರ, ಸರಸ್ವತೀ ಸ್ವಾಮೀಜಿ ಸಾನಿಧ್ಯ ನೀಡಿದ್ದರು. ಕಥಾ ಶ್ರವಣದ ಬಳಿಕ ಭಕ್ತರಿಗೆ ತೀರ್ಥಪ್ರಸಾದ ಹಾಗೂ ಮಹಾಪ್ರಸಾದ ವಿತರಿಸಲಾಯಿತು.
