ಸುದ್ದಿ ಕನ್ನಡ ವಾರ್ತೆ
ಶಿರಸಿ: ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರೆಂಟಿಗಳ ಹೆಸರಿನಲ್ಲಿ ಜನರನ್ನು ಮರುಳುಗೊಳಿಸುತ್ತಿದ್ದು, “ಗ್ಯಾರೆಂಟಿ ಕಿರೀಟ” ತಲೆ ಮೇಲೆ ಇಟ್ಟುಕೊಂಡು ಓಡಾಡುತ್ತಿರುವ ಡುಪ್ಲಿಕೇಟ್ ಕಿರೀಟ ಹೊತ್ತ ಸರ್ಕಾರವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಲೇವಡಿ ಮಾಡಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದರೂ, ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
“ಮೂರು ವರ್ಷದ ಆಡಳಿತವನ್ನು ಗಮನಿಸಿದರೆ ಯಾರು ಯಾವಾಗ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ, ಯಾರು ಯಾವಾಗ ಸ್ಥಾನ ಬಿಡುತ್ತಾರೆ ಎಂಬ ಅಧಿಕಾರದ ಕಿತ್ತಾಟವೇ ಹೆಚ್ಚು ಕಾಣುತ್ತಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಅಧಿಕಾರಿಗಳು ನಿರ್ಜೀವರಾಗಿದ್ದಾರೆ. ಸರ್ಕಾರದ ಒಳಜಗಳದಿಂದ ಅಭಿವೃದ್ಧಿ ಕಾರ್ಯಗಳು ಹಿನ್ನಡೆಯಾಗಿವೆ” ಎಂದು ದೂರಿದರು.
ಶಾಸಕರ ಕ್ಷೇತ್ರಾಭಿವೃದ್ಧಿಯನ್ನೇ ಸರ್ವಾಂಗೀಣ ಅಭಿವೃದ್ಧಿ ಎಂದು ಸರ್ಕಾರ ಬಿಂಬಿಸುತ್ತಿದೆ. ಆದರೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ದೂರದೃಷ್ಟಿ ಮತ್ತು ಯೋಜನೆ ಸರ್ಕಾರಕ್ಕಿಲ್ಲ ಎಂದು ಹೇಳಿದರು.
“ಕರ್ನಾಟಕ ಜನತೆಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿ ಪರಿಣಮಿಸಿದೆ. ಇದು ಪ್ರಗತಿಗೆ ಮಾರಕವಾದ ಸರ್ಕಾರ. ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಈ ಸರ್ಕಾರ ಕಾನೂನು ಬಾಹಿರ ನಿರ್ಧಾರಗಳ ಮೂಲಕ ವಿವಾದಗಳನ್ನು ಸೃಷ್ಟಿಸುತ್ತಿದೆ. ಅಲ್ಪಸಂಖ್ಯಾತರ ಓಲೈಕೆಗೆ ಸರ್ಕಾರ ಸಂಪೂರ್ಣ ಸಮರ್ಪಿತವಾಗಿದ್ದು, ಆರ್ಥಿಕ ದಿವಾಳಿತನದತ್ತ ಸಾಗುತ್ತಿದೆ. ರಾಜ್ಯದ ಸಾಲದ ಮಿತಿ ನಿರಂತರವಾಗಿ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಜನರ ಮೇಲೆಯೇ ಅದರ ಹೊರೆ ಬೀಳಲಿದೆ” ಎಂದು ಕಾಗೇರಿ ಆರೋಪಿಸಿದರು.
ರಾಜ್ಯದ ಹಣಕಾಸು ಪರಿಸ್ಥಿತಿ ಗಂಭೀರವಾಗಿದ್ದು, ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿಮೆಯಾಗುತ್ತಿದೆ. ರೈತರು, ಯುವಕರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ ಎಂದು ಹೇಳಿದರು.
ಈ ವೆಳೆ ಆರ್.ವಿ. ಹೆಗಡೆ ಚಿಪಗಿ, ನಂದನ್ ಸಾಗರ, ನವೀನ್ ಶೆಟ್ಟಿ, ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
