ಸುದ್ದಿ ಕನ್ನಡ ವಾರ್ತೆ
​​ದಾಂಡೇಲಿ:ತಾಲೂಕಿನ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ದಾಂಡೇಲಿ-ಹಳಿಯಾಳ ರಸ್ತೆಯ ಅಜಗಾವ್ ಸಮೀಪ ಭಾನುವಾರ ತಡ ರಾತ್ರಿ ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಎರಡೂ ವಾಹನಗಳು ಜಖಂಗೊಂಡಿವೆ.

​ದಾಂಡೇಲಿಯಿಂದ ಹಳಿಯಾಳ ಕಡೆಗೆ ತೆರಳುತ್ತಿದ್ದ ಯಡೋಗಾ ಗ್ರಾಮದ ಸ್ವಿಫ್ಟ್ ಕಾರು ಹಾಗೂ ಹಳಿಯಾಳದಿಂದ ದಾಂಡೇಲಿ ಕಡೆಗೆ ಬರುತ್ತಿದ್ದಗ ಗದಗ ಮೂಲದ ಕ್ವಾಲಿಸ್ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ದಾಂಡೇಲಿ ಗ್ರಾಮೀಣ ಠಾಣೆಯ ಪಿ ಎಸ್ ಐ ಶಿವಾನಂದ ನಾವದಗಿ ಹಾಗೂ ಪೊಲೀಸರು ಗಾಯಾಳುಗಳನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಒದಗಿಸಿದ್ದಾರೆ. ಘಟನಾ ಸ್ಥಳಕ್ಕೆ ಹಳಿಯಾಳ ಪಿ ಎಸ್ ಐ ಕೃಷ್ಣ ಗೌಡ ಅರಕೇರಿ ಭೇಟಿ ನೀಡಿದ್ದರು. ಈಗ ಎರಡು ಕಾರುಗಳು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಸುಪರ್ದಿಯಲ್ಲಿದೆ.