ಸುದ್ದಿ ಕನ್ನಡ ವಾರ್ತೆ
​ಹಳಿಯಾಳ: ತಾಲೂಕಿನ ಬೆಳವಟಗಿ ಗ್ರಾಮದ ಪ್ರತಿಭಾವಂತ ಅಥ್ಲೀಟ್ ಕುಮಾರ ಶಿವಾಜಿ ಮಾದಪ್ಪಗೌಡ ಅವರು ಚೀನಾದಲ್ಲಿ ನಡೆಯುತ್ತಿರುವ U-23 ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 5000 ಮೀಟರ್ ಓಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದು ಭಾರತ, ಕರ್ನಾಟಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.

​ಗ್ರಾಮೀಣ ಹಿನ್ನೆಲೆಯಿಂದ ಬಂದ ಶಿವಾಜಿ ಮಾದಪ್ಪಗೌಡ ಅವರು ತಮ್ಮ ನಿರಂತರ ಪರಿಶ್ರಮ, ಕಠಿಣ ಅಭ್ಯಾಸ ಹಾಗೂ ಅಚಲ ಛಲದ ಮೂಲಕ ಈ ಮಹತ್ವದ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆ ಉತ್ತರ ಕನ್ನಡ ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದು, ಗ್ರಾಮೀಣ ಪ್ರತಿಭೆಗೂ ಜಾಗತಿಕ ವೇದಿಕೆಯಲ್ಲಿ ಮಿಂಚುವ ಸಾಮರ್ಥ್ಯವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

​ಈ ಅಮೋಘ ಸಾಧನೆಗಾಗಿ ಶಿವಾಜಿ ಮಾದಪ್ಪಗೌಡ ಅವರಿಗೆ ವಿವಿಧ ಗಣ್ಯರು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಮುಂಬರುವ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿಯೂ ಚಿನ್ನದ ಪದಕಗಳನ್ನು ಗೆದ್ದು ಭಾರತ ಮತ್ತು ಕರ್ನಾಟಕದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಎಲ್ಲರೂ ಹಾರೈಸಿದ್ದಾರೆ.