ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯವರು 13.8.26 ರಂದು ಗ್ರಾಮ ಪಂಚಾಯತಿಗಳಿಗೆ ನೀಡಿರುವ ಮಾರ್ಗಸೂಚಿಯನ್ನು ಗಾಂಗೋಡಾ ಗ್ರಾಮ ಪಂಚಾಯತದಲ್ಲಿ ದಿನಾಂಕ:25-09-2026ರ ಶುಕ್ರವಾರ ಸಾರ್ವಜನಿಕರು ತೀವ್ರವಾಗಿ ವಿರೋಧಿಸಿದರು.

​ಈ ಮಾರ್ಗಸೂಚಿಯಂತೆ ಅರಣ್ಯ, ಬೆಟ್ಟ, ಸರ್ಕಾರಿ ಜಾಗಗಳಲ್ಲಿ, ಗಾಂವಠಾಣದಲ್ಲಿ ಕಟ್ಟಿರುಪ ಕಟ್ಟಡಗಳಿಗೆ ಈ ಹಿಂದೆ ಸ್ವೀಕರಿಸಲಾಗುತ್ತಿದ್ದ ಆಸ್ತಿಕರ, ತೆರಿಗೆಗಳನ್ನು ಮುಂದುವರೆಸದಂತೆ ಸೂಚಿಸಲಾಗಿದೆ. ಅಂತಹ ಆಸ್ತಿಗಳ ಪಟ್ಟಿ ಮಾಡಿ ತೆರಿಗೆ ನಿರ್ಧಾರದಿಂದ ಕೈ ಬಿಡಲು ಸೂಚಿಸಿದ್ದು ಇದು ಜನತೆಗೆ ಮಾಡುವ ಮಹಾ ದ್ರೋಹ ಎಂದು ಸಾರ್ವಜನಿಕರು ಪ್ರತಿಭಟಿಸಿದರು. ಇದರಿಂದ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನೂರಾರು ಕುಟುಂಬಗಳು ಅನಾಥವಾಗುತ್ತವೆ.

​ವಸತಿ ಹಕ್ಕು, ಆಸ್ತಿ ಹಕ್ಕು ಸ್ಥಳೀಯ ದಾಖಲೆಗಳು ನಾಶವಾಗುತ್ತವೆ ಎಂದು ತಿಳಿದ ಜನರು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುವ ಭಯದಿಂದ ಸರ್ಕಾರದ ಈ ನಿರ್ಧಾರದ ವಿರುದ್ಧ ಸಿಡಿದೆದ್ದರು,ಗಾಂಗೋಡಾ ಗ್ರಾಮ ಪಂಚಾಯತಿಗೆ ಬಂದು ಪ್ರತಿಭಟಿಸಿದರು. ಜೊತೆಯಲ್ಲಿ ಸರ್ಕಾರದ ಈ ಆದೇಶವನ್ನು ತಕ್ಷಣವೇ ಹಿಂದೆ ಪಡೆಯಲು ಸರ್ಕಾರಕ್ಕೆ ಸೂಚಿಸಬೇಕೆಂದು ಪಂಚಾಯತ ಅಭಿವೃದ್ಧಿಯ ಅಧಿಕಾರಿಯ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ನೀಡಿ ಅಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸುಬ್ರಾಯ ಹೆಗಡೆ,ಪ್ರವೀಣ ದೇಸಾಯಿ,ಊರಿನ ಪ್ರಮುಖರು,ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.