Banner Ad

ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ: ತಾಲೂಕಿನ ಕಾನಸೂರು ಗ್ರಾ.ಪಂ ವ್ಯಾಪ್ತಿಯ ಶೇಡಿದಂಟಕಲ್ ಗ್ರಾಮದ ವಿನಾಯಕ ಹೆಗಡೆಯವರ ಮನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಮನೆಯಲ್ಲಿ ಶೇಖರಿಸಿಡಲಾಗಿದ್ದ 70ಕ್ಕೂ ಅಧಿಕ ಚೀಲ ಸಿಪ್ಪೆ ಅಡಿಕೆ ರಾಶಿ ಬೆಂಕಿಗಾಹುತಿಯಾಗಿದೆ. ಈ ಘಟನಾ ಸ್ಥಳಕ್ಕೆ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಭೇಟಿ ನೀಡಿ ಸ್ಥಿತಿಗತಿಗಳನ್ನು ಅವಲೋಕಿಸಿದರು.

Banner Ad

ನಂತರ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, “ಈಗಾಗಲೇ ಎಲೆ ಚುಕ್ಕಿರೋಗದಿಂದಾಗಿ ಬಹುತೇಕ ಅಡಿಕೆ ಮರಗಳು ನಾಶವಾಗಿವೆ. ಇನ್ನು ಕೆಲವು ಭಾಗಗಳಲ್ಲಿ ಕೊಳೆರೋಗ ಬಂದು ಶೇ. 50 ರಿಂದ 60 ರಷ್ಟು ಇಳುವರಿ ಕಡಿಮೆಯಾಗಿದೆ. ಇದರಿಂದಾಗಿ ಬೆಳೆಗಾರರು ಈಗಾಗಲೇ ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಹಾನಿಗೊಳಗಾದ ಅಡಿಕೆ ಬೆಳೆಗಾರನಿಗೆ ರಾಜ್ಯ ಸರ್ಕಾರವು ವಿಶೇಷ ಪರಿಹಾರವನ್ನು ನೀಡಬೇಕು. ಆ ಮೂಲಕ ಸರ್ಕಾರ ರೈತಾಪಿ ವರ್ಗದ ಜೊತೆಗಿದೆ ಎನ್ನುವ ಆತ್ಮವಿಶ್ವಾಸವನ್ನು ತುಂಬಬೇಕು” ಎಂದು ಒತ್ತಾಯಿಸಿದರು.

ಇದೇ ವೇಳೆ ಅಡಿಕೆ ಬೆಳೆಗಾರರಾದ ವಿನಾಯಕ ಹೆಗಡೆಯವರು ಮಾತನಾಡಿ, “ಬೆಂಕಿ ಅವಘಡದಿಂದಾಗಿ ಶೇ. 90 ರಷ್ಟು ಬೆಳೆ ನಾಶವಾಗಿದ್ದು, ಅಂದಾಜು 4 ಲಕ್ಷ ರೂ. ನಷ್ಟವಾಗಿದೆ” ಎಂದು ಅನಂತಮೂರ್ತಿ ಹೆಗಡೆಯವರಿಗೆ ಮಾಹಿತಿ ನೀಡಿದರು.

Banner Ad