ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಹನುಮಾನಲೇನ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸೂಚನೆಯಂತೆ ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹನುಮಾನಲೇನ್ ಹಾಗೂ ಎಸ್ಡಿಎಂಸಿ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ಪೋಷಕ-ಶಿಕ್ಷಕರ ಮಹಾಸಭೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಹನುಮಾನಲೇನ್ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸಹ ಶಿಕ್ಷಕ ವೃಂದದವರ ಮೂಲಕ ಹೂ ಗುಚ್ಛ ನೀಡುವ ಮೂಲಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು,ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ ಹೆಚ್ ಭಾಗವಾನರವರು ಸ್ವಾಗತಿಸಿದರು.
ಮಹಾಸಭೆಯ ಕಾರ್ಯಕ್ರಮಕ್ಕೂ ಮುನ್ನ ಪ್ರಮುಖ ಬೀದಿಗಳಲ್ಲಿ ದಾಖಲಾತಿ ಜಾಗೃತಿ ಮೆರವಣಿಗೆ ನಡೆಯಿತು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ, ವಿವಿಧ ಕಾರ್ಯಕ್ರಮಗಳು ಹಾಗೂ ಜಾಗೃತಿ ಚಟುವಟಿಕೆಗಳು ನಡೆದವು.ಜ್ಞಾನದ ದೇಗುಲಕ್ಕೆ ಮರಳಿ ಹೆಜ್ಜೆ ಇಡುತ್ತಿರುವ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಇಡೀ ಶಾಲಾ ಆವರಣವನ್ನು ಹಸಿರು ತಳಿರು-ತೋರಣಗಳು, ವರ್ಣರಂಜಿತ ಬಲೂನುಗಳು ಹಾಗೂ ಆಕರ್ಷಕ ರಂಗೋಲಿ ಕಲಾಕೃತಿಗಳಿಂದ ಶೃಂಗರಿಸಲಾಗಿತ್ತು.ಶಾಲೆಗೆ ಹೊಸದಾಗಿ ಆಗಮಿಸುತ್ತಿರುವ ಪುಟ್ಟ ಮಕ್ಕಳನ್ನು ಮತ್ತು ಇತರ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ವಾದ್ಯಗಳೊಂದಿಗೆ,ಪುಷ್ಪ ನೀಡಿ ಹಾಗೂ ಪುಷ್ಪ ವೃಷ್ಟಿ ಮಾಡುವ ಮೂಲಕ,ಕಲಿಕಾ ಸಾಮಗ್ರಿಗಳನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಸಚಿಕುಮಾರ ನಾಯರರವರು ವಿತರಣೆ ಮಾಡುವ ಮೂಲಕ ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಮಕ್ಕಳ ಮೊಗದಲ್ಲಿ ಉತ್ಸಾಹ ಎದ್ದು ಕಾಣುತ್ತಿತ್ತು.
ಪೋಷಕ-ಶಿಕ್ಷಕರ ಮಹಾಸಭೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರು ಇದೊಂದು ಸರಕಾರದ ಹೆಮ್ಮೆಯ ಕಾರ್ಯಕ್ರಮ ನಾವೆಲ್ಲರೂ ಸೇರಿ ವಿದ್ಯಾರ್ಥಿಗಳನ್ನು ಶಾಲಾ ಶುಭಾರಂಭ ದಿನದಂದು ಅದ್ದೂರಿಯಾಗಿ ಬರಮಾಡಿಕೊಂಡಿರುವುದು ವಿದ್ಯಾರ್ಥಿಗಳಿಗೆ ಹರ್ಷ ತರುವುದಲ್ಲದೆ ಕಲಿಕೆ ವೃದ್ಧಿಯಾಗುತ್ತದೆ, ಹನುಮಾನಲೇನ್ ಶಾಲೆಯಲ್ಲಿ ಕಲಿಕಾ ಸ್ನೇಹಿ ವಾತಾವರಣ ನಿರ್ಮಾಣಗೊಂಡಿದ್ದು,ಸ್ಥಳೀಯ ಸರ್ಕಾರವಾದ ಗ್ರಾಮ ಪಂಚಾಯತ, ಎಸ್ಡಿಎಂಸಿ, ಶಿಕ್ಷಕರು ಹಾಗೂ ಗ್ರಾಮಸ್ಥರ ಸಹಭಾಗಿತ್ವದಿಂದ ಶಾಲೆ ಉತ್ತಮ ಪ್ರಗತಿ ಸಾಧಿಸಿದೆ. ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೂರಕ ವಾತಾವರಣ ಲಭ್ಯವಿದೆ,ಇಲ್ಲಿನ ಸಮುದಾಯದವರು ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಂತಹ ಉತ್ತಮ ಶೈಕ್ಷಣಿಕ ವಾತಾವರಣದಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ‘ಉತ್ತಮ ಕಲಿಕೆ ಉಜ್ವಲ ಭವಿಷ್ಯ’ ಎಂಬ ಧೇಯದೊಂದಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದರು. ಕಳೆದ ಎರಡು ವರ್ಷದ ಹಿಂದೆ ಶಾಲೆಗೆ ಲಭಿಸಿದ್ದ ತಾಲೂಕಾ ಮಟ್ಟದ ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿಯನ್ನು ಎಲ್ಲರ ಸಹಕಾರದಿಂದ ಪಡೆದಿದ್ದನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ಸಚಿಕುಮಾರ ನಾಯರ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು, ಪೋಷಕರು ಹಾಗೂ ಸಮಾಜದ ಪಾತ್ರ ಮಹತ್ವದ್ದಾಗಿದೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಎಸ್ಡಿಎಂಸಿ ಸದಾ ಬದ್ಧವಾಗಿದ್ದು, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನಿರಂತರವಾಗಿ ಶ್ರಮಿಸಲಿದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರು ಸರ್ಕಾರಿ ಶಾಲೆಗಳು ಎಲ್ಲ ರೀತಿಯ ಸೌಕರ್ಯ ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸಬೇಕು ಹಾಗೂ ದಾಖಲಾದ ಎಲ್ಲ ಮಕ್ಕಳನ್ನು ನಿರಂತರವಾಗಿ ಶಾಲೆಗೆ ಬರುವಂತೆ ಪಾಲಕರು ಹಾಗೂ ಪೋಷಕರು ಸಹಕರಿಸಬೇಕೆಂದು ತಿಳಿಸಿದರು. ಸರಕಾರಿ ಶಾಲೆಗಳಲ್ಲಿ ಉತ್ತಮ ನುರಿತ ಶಿಕ್ಷಕರಿದ್ದು, ಗುಣಮಟ್ಟದ ಕಲಿಕೆ ಸಿಗುತ್ತದೆ. ಆದ್ದರಿಂದ ಎಲ್ಲರೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಬೇಕೆಂದು ತಿಳಿಸಿದರು.
ನಂತರ ಮಾತನಾಡಿ ಶಾಲೆಗೆ ದಾಖಲಾದ ಎಲ್ಲ ಮಕ್ಕಳನ್ನು ಪಾಲಕರು ನಿರಂತರವಾಗಿ ಶಾಲೆಗೆ ಕಳಿಸಬೇಕು ಹಾಗೂ ಮಕ್ಕಳ ಆರೋಗ್ಯ ಹಾಗೂ ಸ್ವಚ್ಛತೆಯ ಕಡೆ ಗಮನಹರಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷರಾದ ವಿನಂತಿ ಸೋಲೆಕರ, ಶಾಲೆಯ ಶಿಕ್ಷಕ ವೃಂದದವರಾದ ನಾಗರತ್ನಾ ಮೊಗೇರ,ಅನಿಸ್ ಫಾತೀಮಾ,ಸುನಿತಾ ಆರ್,ಸಂಜನಾ ಮಿರಾಶಿ, ಶೈಕ್ಷಣಿಕ ಸಂಘದ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು, ಪಾಲಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕೊನೆಯಲ್ಲಿ ಎಲ್ಲರಿಗೂ ಸಲ್ಲಿಸಲಾಯಿತು.
