ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಜಗತ್ಪ್ರಸಿದ್ಧ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಪ್ರವಾಸಿಗರು ಆಗಮಿಸುತ್ತಾರೆ. ಗೋವಾ ರಾಜ್ಯಕ್ಕೆ ಬೇಸಿಗೆಯಲ್ಲಿ ಮಾತ್ರವಲ್ಲದೆಯೇ ಮಳೆಗಾಲದಲ್ಲಿಯೂ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿಯೇ ಇದೆ. ಇಂತಹ ಜಗತ್ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಂದಾಗಿ ಥಾರ್ ವಾಹನಗಳನ್ನು ಪ್ರವಾಸಿಗರಿಗೆ ನೀಡಲು ನಿರ್ಬಂಧ ಹೇರಲು ಸರ್ಕಾರ ಮುಂದಾಗಿದೆ.

ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿ ಸ್ವತಂತ್ರವಾಗಿ ಓಡಾಟ ನಡೆಸಲು ಇಲ್ಲಿ ಬಾಡಿಗೆ ಕಾರುಗಳನ್ನು ಪಡೆದುಕೊಳ್ಳುತ್ತಾರೆ. ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಪ್ರಮುಖವಾಗಿ ಥಾರ್ ಜೀಪ್ ನ್ನು ಬಾಡಿಗೆ ಪಡೆದುಕೊಳ್ಳುತ್ತಾರೆ. ಥಾರ್ ಬಾಡಿಗೆ ದಿನಕ್ಕೆ 6000 ರೂ ಇದೆ. ಆದರೆ ಇದೀಗ ಗೋವಾಕ್ಕೆ ಬರುವ ಪ್ರವಾಸಿಗರು ಥಾರ್ ಜೀಪ್ ಬಾಡಿಗೆಗೆ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಸುರಕ್ಷತಾ ಕಾರಣಗಳಿಂದಾಗಿ ಗೋವಾ ರಾಜ್ಯ ಸರ್ಕಾರವು ಗೋವಾದಲ್ಲಿ ಥಾರ್ ವಾಹನಗಳಿಗೆ ಹೊಸ ಪರವಾನಗಿಯನ್ನು ನೀಡುವುದನ್ನು ನಿಷೇಧಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಾರಿಗೆ ಸಚಿವ ಮಾವಿನ್ ಗುದಿನ್ಹೊ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

ಗೋವಾ ರಾಜ್ಯದಲ್ಲಿ ಥಾರ್ ವಾಹನಗಳ ಅಪಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಪಣಜಿಯಲ್ಲಿ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿ- ಥಾರ್ ಕಾರುಗಳ ಬಾಡಿಗೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಶೀಘ್ರದಲ್ಲಿಯೇ ರಾಜ್ಯ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಲಾಗುವುದು ಎಂಬ ಮಾಹಿತಿ ನೀಡಿದರು.
ಥಾರ್ ವಾಹನವು ಅತ್ಯಂತ ಶಕ್ತಿಶಾಲಿ ವಾಹನವಾಗಿದ್ದು , ಹೆಚ್ಚಿನ ಚಾಲಕರ ಬಳಿ ಈ ವಾಹನವನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಈ ವಾಹನದ ವೇಗ ತುಂಬಾ ಹೆಚ್ಚಿದ್ದು, ಅನಿಯಂತ್ರಿತವಾಗಿದೆ. ಇದರಿಂದಾಗಿ ಥಾರ್ ನಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ. ರಾಜ್ಯ ಸರ್ಕಾರವು ಮಹೆಂದ್ರಾ ಥಾರ್ ವಾಹನದ ಗುತ್ತಿಗೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಪ್ರಸ್ತುತ ಸರ್ಕಾರವು ಗೋವಾದಲ್ಲಿ ಥಾರ್ ವಾಹನದ ಹೊಸ ಪರವಾನಗಿಯನ್ನು ನಿಷೇಧಿಸಲು ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಸಚಿವ ಮಾವಿನ್ ಗುದಿನ್ಹೊ ಮಾಹಿತಿ ನೀಡಿದರು. ಗೋವಾದಲ್ಲಿ ಬಾಡಿಗೆ ಪೊಡೆದ ದ್ವಿಚಕ್ರ ವಾಹನಗಳು ನಇತರ ವಾಹನಗಳಿಗಿಂತ ಎರಡುಪಟ್ಟು ಹೆಚ್ಚು ರಸ್ತೆ ಅಪಘಾತದಲ್ಲಿ ಭಾಗಿಯಾಗಿದೆ ಎಂದು ತಿಳಿದುಬಂದಿದೆ.

ಬಾಡಿಗೆಗೆ ವಾಹನಗಳನ್ನು ಪ್ರವಾಸಿಗರಿಗೆ ನೀಡುವ ಸಂದರ್ಭದಲ್ಲಿ ಅನೇಕ ನಿವಾಹಕರು ವಾಹನಗಳ ವೇಗವನ್ನು ಮಿತಿಗೊಳಿಸುವ ಸ್ಪೀಡ್ ಗವರ್ನರ್ ಅಥವಾ ವಾಹನ ಸ್ಥಳ ಟ್ರ್ಯಾಕಿಂಗ್ ಸಾಧನವನ್ನು ನಿಷ್ಕ್ರೀಯಗೊಳಿಸಿರುತ್ತಾರೆ. ಇಂತಹ ಪ್ರಕರಣ ಕಂಡುಬಂದಲ್ಲಿ ನಿರ್ವಾಹಕರಿಗೆ ಸರ್ಕಾರ 10,000 ದಂಡ ವಿಧಿಸುವುದಾಗಿ ಘೋಷಿಸಿದೆ.

ಗೋವಾದಲ್ಲಿ 26 ಸ್ಥಳಗಳಲ್ಲಿ ಎಐ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರಾಯೋಗಿಕ ಅವಧಿಯಲ್ಲಿ ಒಂದೇ ದಿನದಲ್ಲಿ 56,500 ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಗಳನ್ನು ಈ ಕ್ಯಾಮರಾಗಳು ಸೆರೆ ಹಿಡಿದಿದೆ.ಇಂತಹ ವಾಹನ ಮಾಲೀಕರಿಗೆ ಕೂಡಲೇ ಈ ಚಾನಲ್ ಗಳನ್ನು ಕಳುಹಿಸಲಾಗುತ್ತದೆ. ಗೋವಾದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಗೋವಾ ಸರ್ಕಾರ ಕಠಿಣ ನಿಯಮಗಳ ಜಾರಿಗೆ ಮುಂದಾಗಿದೆ.