ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ್‌ಗೆ ಕೆಲಸಕ್ಕೆ ಸರಿಯಾಗಿ ಬಾರದೆ ಸಾರ್ವಜನಿಕರ ಮೇಲೆ ದರ್ಪ ತೋರುತ್ತಾ, ವಸತಿ ಯೋಜನೆ ಹಾಗೂ ವಿದ್ಯುತ್ ಸಂಪರ್ಕ ನೀಡುವಲ್ಲಿ ಬಡ ಜನರಿಗೆ ತೊಂದರೆ ನೀಡುತ್ತಿರುವ ದಿನಗೂಲಿ ನೌಕರ, ಡೇಟಾ ಎಂಟ್ರಿ ಆಪರೇಟರ್ ಗಜಾನನ ಪಾಟೀಲ್ ಎಂಬಾತನನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪ್ರಧಾನಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಣಪತಿ ಗಾವಡೆ ಮತ್ತಿತರರು ಜೋಯಿಡಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಓ) ಭಾರತಿ ಎನ್,ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಧಾನಿ ಗ್ರಾಮ ಪಂಚಾಯತ್‌ನಲ್ಲಿ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿರುವ ಗಜಾನನ ಪಾಟೀಲ್ ಒಂದು ದಿನವೂ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಗ್ರಾಮಕ್ಕೆ ಬರುವ ಬಡ ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾನೆ. ಸರ್ಕಾರದ ಆಶ್ರಯ ಯೋಜನೆಗಳಡಿ ಬಡವರಿಗೆ ಸಿಗಬೇಕಾದ ಮನೆಗಳ ಹಂಚಿಕೆಯಲ್ಲಿ ವ್ಯಾಪಕ ಮೋಸ ಎಸಗುತ್ತಿದ್ದು, ಜನರಿಂದ ಹಣ ವಸೂಲಿ ಮಾಡುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅರ್ಹ ಬಡವರನ್ನು ಬಿಟ್ಟು ತನಗೆ ಬೇಕಾದವರಿಗೆ ಮಾತ್ರ ನಿಯಮ ಬಾಹಿರವಾಗಿ ಮನೆಗಳನ್ನು ಹಂಚಿಕೆ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೆ, ಸಾರ್ವಜನಿಕರು ವಿದ್ಯುತ್ ಕನೆಕ್ಷನ್ ಪಡೆಯಲು ಹೋದಾಗಲೂ ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾನೆ ಎಂದು ಅವರು ದೂರಿದ್ದಾರೆ.
ಅಧಿಕಾರಿಗಳ ಮಾತಿಗೂ ಬೆಲೆ ಇಲ್ಲ:
ಈ ನೌಕರನ ಉದ್ಧಟತನ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ, ಗ್ರಾಮ ಪಂಚಾಯತ ದ ಪಿಡಿಓ ಹಾಗೂ ಕಾರ್ಯದರ್ಶಿಗಳನ್ನು ಈತ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಹಿರಿಯ ಅಧಿಕಾರಿಗಳ ಆದೇಶಗಳಗೂ ಕಿಮ್ಮತ್ತು ನೀಡುತ್ತಿಲ್ಲ. ಇಓ ಭಾರತಿ ಎನ್,ಅವರ ಮಾತಿಗೂ ಕ್ಯಾರೆ ಎನ್ನದಂತೆ ವರ್ತಿಸುತ್ತಿರುವ ಗಜಾನನ ಪಾಟೀಲ್‌ನನ್ನು ಇದುವರೆಗೂ ಕೆಲಸದಿಂದ ವಜಾ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜನರ ಸಮಸ್ಯೆ ಆಲಿಸದೆ, ಕರ್ತವ್ಯ ಲೋಪ ಎಸಗುತ್ತಾ ಬಡ ಜನರಿಗೆ ತೊಂದರೆ ನೀಡುತ್ತಿರುವ ಇಂತಹ ಬೇಜವಾಬ್ದಾರಿ ನೌಕರ ನಮಗೆ ಬೇಡ. ಕೂಡಲೇ ಈತನನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಗಣಪತಿ ಗಾವಡೆ ಹಾಗೂ ಸ್ಥಳೀಯ ಸಾರ್ವಜನಿಕರು ಇಓ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಬಲವಾಗಿ ಆಗ್ರಹಿಸಿದ್ದಾರೆ. ಬಡವರ ಕಷ್ಟಕ್ಕೆ ಸ್ಪಂದಿಸದ ಈ ನೌಕರನ ವಿರುದ್ಧ ಹಿರಿಯ ಅಧಿಕಾರಿಗಳು ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.