ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ಭಾರತೀಯ ಜನತಾ ಪಾರ್ಟಿ ಜೋಯಿಡಾ ಮಂಡಲದ ವತಿಯಿಂದ ಇಂದು, ಶುಕ್ರವಾರ ದಿನಾಂಕ 25/09/2026 ರಂದು ಜೋಯಿಡಾ ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತದಲ್ಲಿ ‘ನಮ್ಮ ಮನೆ ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಗ್ರಾಮ ಪಂಚಾಯತಿಗೆ ತೆರಳಿ, ಪಿ.ಡಿ.ಒ. ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಕಾಮ್ರೇಕರ ಅವರು, ಅರಣ್ಯ, ಬೆಟ್ಟ, ಸರ್ಕಾರಿ ಭೂಮಿ, ಗ್ರಾಮಠಾಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಮನೆಗಳ ಆಸ್ತಿ ತೆರಿಗೆ ಸ್ವೀಕಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಅರಣ್ಯ, ಸರ್ಕಾರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ, ತಲೆತಲಾಂತರಗಳಿಂದ ವಾಸಿಸುತ್ತಿರುವ ಸಾವಿರಾರು ಕುಟುಂಬಗಳಿದ್ದು, ಸರ್ಕಾರದ ಈ ಕ್ರಮದಿಂದ ಅಂತಹ ಕುಟುಂಬಗಳಿಗೆ ತೊಂದರೆಯಾಗಲಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಈ ಜನವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
“ಈ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹಣೆ ಸೇರಿದಂತೆ ಆಡಳಿತಾತ್ಮಕ ಚಟುವಟಿಕೆಗಳ ಮೇಲೆಯೂ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ರಾಜ್ಯ ಸರ್ಕಾರವು ಕೂಡಲೇ ಈ ಆದೇಶವನ್ನು ಹಿಂಪಡೆದು, ಗ್ರಾಮೀಣ ಭಾಗದ ಜನರಿಗೆ ನ್ಯಾಯ ಒದಗಿಸಬೇಕು” ಎಂದು ಅರುಣ್ ಕಾಮ್ರೇಕರ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದು ಜೊಕೇರಿ.ಸಂತೋಷ ಸಾವಂತ. ಅನಿಲ್ ಪಟ್ಟೆ. ಸಂದೀಪ ಗವಡಾ. ರೂಪೇಶ್ ದೇಸಾಯಿ. ಸುರೇಶ್ ಕೋಟೆಕಲ್. ರೇಣುಕಾ ಚಿತ್ತೊಡ್ಗಿ
ಅಂಕಿತ ಗವಡಾ. ಹಾಗೂ 500 ಕ್ಕೂ ಹೆಚ್ಚು ಗ್ರಾಮಸ್ಥರು ಬಿಜೆಪಿ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.
