ಸುದ್ದಿ ಕನ್ನಡ ವಾರ್ತೆ
ದಾಂಡೇಲಿ: ನಗರದ ಪ್ರಸಿದ್ಧ ಶ್ರೀ ದಾಂಡೇಲಪ್ಪ ಜಾತ್ರೆಯ ಅಂಗವಾಗಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಲ್ಲಿ ಅಕ್ಟೋಬರ್ 20ರಂದು ಅದ್ಧೂರಿ ರಾಮಲೀಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದರು.
ನಗರದ ಡಿಲಕ್ಸ್ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6:30ರಿಂದ ರಾತ್ರಿ 8ರ ವರೆಗೆ ಬಂಗೂರನಗರದ ಡಿಲಕ್ಸ್ ಮೈದಾನದಲ್ಲಿ ರಾಮಲೀಲೋತ್ಸವ ನಡೆಯಲಿದೆ. ಈ ಬಾರಿ 52 ಅಡಿ ಎತ್ತರದ ರಾವಣ ಹಾಗೂ 48 ಅಡಿ ಎತ್ತರದ ಮೇಘನಾಥ ಮತ್ತು ಕುಂಭಕರ್ಣ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಅಗ್ನಿಶಾಮಕ ವಾಹನ, ಆಂಬುಲೆನ್ಸ್, ವೈದ್ಯರು ಹಾಗೂ ದಾದಿಯರ ವ್ಯವಸ್ಥೆ ಮಾಡಲಾಗಿದೆ ಎಂದರು.
ಡಿವೈಎಸ್ಪಿ ಬಿ. ಗಿರೀಶ್ ಮಾತನಾಡಿ, ಶ್ರೀ ಧಾಂಡೇಲಪ್ಪ ಜಾತ್ರೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಾತ್ರೆಯ ಮುನ್ನಾದಿನ ಸಂಜೆ 6 ಗಂಟೆಯಿಂದ ಜಾತ್ರೆ ಮುಗಿಯುವವರೆಗೆ ಧಾಂಡೇಲಿಯಿಂದ ಹಳಿಯಾಳಕ್ಕೆ ಹಾಗೂ ಹಳಿಯಾಳದಿಂದ ಧಾಂಡೇಲಿಗೆ ಸಂಚರಿಸುವ ಬಸ್ಗಳು ಮತ್ತು ಇತರ ವಾಹನಗಳಿಗೆ ಕರ್ಕಿ-ಬಜಾರ್ನಾಕಾ,ಬಾಂಬೂಗೇಟ್ ಹಾಗೂ ಸೋಮಾನಿ ವೃತ್ತದ ಮಾರ್ಗವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ದ್ವಿಚಕ್ರ ವಾಹನಗಳ ಪಾರ್ಕಿಂಗ್ ನಗರದ ಕನ್ಯಾ ವಿದ್ಯಾಲಯದಲ್ಲಿ ಹಾಗೂ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಜನತಾ ವಿದ್ಯಾಲಯದ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಟೋ ರಿಕ್ಷಾಗಳು ಹಳಿಯಾಳ ರಸ್ತೆಯ ಮೂರನೇ ಗೇಟ್ವರೆಗೆ ಮಾತ್ರ ಸಂಚರಿಸಲು ಅವಕಾಶವಿದೆ ಎಂದರು.
ಪಿಎಸ್ಐ ಅಮಿನ್ ಅತ್ತಾರ ಮಾತನಾಡಿ, ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ಮಾನಿಟರ್ಗಳನ್ನು ಅಳವಡಿಸಲಾಗಿದೆ ಎಂದರು.
ಸಿಪಾಯಿ ಶಿವಾನಂದ ಅಂಬಿಗೇರ, ಪಿಎಸ್ಐ ಶಿವಾನಂದ ನಾವದಗಿ, ಪಿಎಸ್ಐ ಮಂಜುಳಾ ರಾವ್ಜಿ, ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ಜಿ., ಕುಶಾಲಪ್ಪ ಹಾಗೂ ಎಸ್.ಜಿ. ಪಾಟೀಲ ಉಪಸ್ಥಿತರಿದ್ದರು.
