ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ರೈತ ಸಂಘದ ಹಿರಿಯ ಸದಸ್ಯರಾದ ರುಕ್ಮಿಣಿ ವೆಂಕೋ ವೆಳಿಪ್, ಕಾರ್ಟೋಳಿ ಇವರು ದಿನಾಂಕ ೭-೮-೨೦೨೬ ರಂದು ಅಗಲಿದರು. ಅಂದಾಜು ೮೫ ವರ್ಷ ತುಂಬಿದ ಇವರು ಕುಣಬಿ ಜಾನಪದ ಕಲಾವಿದರಾಗಿದ್ದರು.
ಕರ್ನಾಟಕ ಪ್ರಾಂತ ರೈತ ಸಂಘ ಸಂಘಟಿಸಿದ ಎಲ್ಲಾ ಹೋರಾಟಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕಡುಬಡತನದಲ್ಲಿ ಕೃಷಿ ಮಹಿಳೆಯಾಗಿ, ನೆರೆಹೊರೆಯವರ ಸಂಕಷ್ಟಕ್ಕೆ ಒದಗುತ್ತ ಮುಗ್ಧ ಜೀವನ ನಡೆಸಿದವರು.
ಸ್ಥಳೀಯ ಹಬ್ಬಗಳಾದ ಚತುರ್ಥಿ, ನೌಮಿ, ಸುಗ್ಗಿ, ಸಂಕ್ರಾಂತಿ, ದೀಪಾವಳಿ ಸಂದರ್ಭದಲ್ಲಿ ಮತ್ತು ಸಹಯಾನ, ಚಿಂತನ ಉತ್ತರ ಕನ್ನಡ, ಗಡಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಘಟಿಸಿದ ಕೆಲವು ಕಾರ್ಯಕ್ರಮಗಳಲ್ಲಿ ಕಲಾವಿದರಾಗಿ ತಮ್ಮ ತಂಡದೊಂದಿಗೆ ಭಾಗವಹಿಸಿದ್ದರು. ಕುಣಬಿ ಬುಡಕಟ್ಟುಗಳು ಕಾಡು ನಾಶ ಮಾಡುವವರಲ್ಲ, ಹಸಿರು ಬೆಳೆಯುವವರು ಎಂಬುದನ್ನು ಬಿಂಬಿಸುವ ಹಳೆಯ ಕಾಲದ ಹಾಡುಗಳನ್ನು, ಗಾದೆಗಳನ್ನು ತಮ್ಮ ನೆನಪಿನಿಂದ ಹೇಳುತ್ತಿದ್ದರು. ಜೋಯಿಡಾ ಕಾಡೊಳಗಿನ ಒಡಲು ಪುಸ್ತಕ ಬರೆಯುವಾಗ ಹಾಗೂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೋಯಿಡಾ ಬುಡಕಟ್ಟುಗಳ ಪರಿಸ್ಥಿತಿ ಹೇಗಿತ್ತೆಂದು ಅರಿಯುವ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಬುಡಕಟ್ಟು ಜನರು ತಮ್ಮ ಊರಿನಲ್ಲಿ ಹೇಗೆಲ್ಲ ಸಂಕಷ್ಟ ಅನುಭವಿಸಿದರು ಎಂಬುದನ್ನು ತಮ್ಮ ಅಜ್ಜ ಅಜ್ಜಿಯರ ಕತೆಗಳ ಮೂಲಕ ಹೇಳಿದ್ದರು.
ಇವರು ಸಿಪಿಐಎಂ ಪಕ್ಷದ ಹಿತೈಷಿಗಳಾಗಿದ್ದರು. ಅವರಿಗೆ ನಮ್ಮ ಅಂತಿಮ ನಮನಗಳು. ಕುಟುಂಬಕ್ಕೆ ಆಪ್ತರಿಗೆ ಸಾಂತ್ವನಗಳು.ಎಂದು ಸಿಪಿಐಮ್ ನ ಜಿಲ್ಲಾ ಪ್ರಮುಖ ರಾದ ಯಮುನಾ ಗಾoವ್ಕಾರ ಕಂಬನಿ ಮಿಡಿದಿದ್ದಾರೆ.
