ಸುದ್ದಿ ಕನ್ನಡ ವಾರ್ತೆ
ಶಿರಸಿ: ಪಿತ್ರವಾಕ್ಯ ಪರಿಪಾಲನೆ ರಾಮಾಯಣದ ಶ್ರೇಷ್ಠ ಮೌಲ್ಯಗಳಲ್ಲಿ ಒಂದಾಗಿದ್ದು, ಇದು ಭಾರತೀಯ ಸಂಸ್ಕೃತಿಯ ಮಹತ್ವದ ಆದರ್ಶವೂ ಆಗಿದೆ ಎಂದು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ ಕಿರ್ಕೋಳ್ಳಿ ಹೇಳಿದರು.
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗುರುವಾರ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷೋಪನ್ಯಾಸ ನೀಡಿದರು.
ತಂದೆ-ತಾಯಿ, ಗುರು-ಹಿರಿಯರ ಮಾತುಗಳನ್ನು ಗೌರವದಿಂದ ಕೇಳಿ, ಅವುಗಳನ್ನು ನಿದ್ಧೆಯಿಂದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಶ್ರೇಯಸ್ಸಿನ ಸಾಧನವಾಗಿದೆ. ಚಕ್ರವರ್ತಿಯ ಸಿಂಹಾಸನವನ್ನು ಅಲಂಕರಿಸಬೇಕಾಗಿದ್ದ ಶ್ರೀರಾಮನು ಪಿತೃವಾಕ್ಯ ಪರಿಪಾಲನೆಗಾಗಿ ದೃಢಸಂಕಲ್ಪದಿಂದ ರಾಜ್ಯ, ಅಧಿಕಾರ ಸೇರಿದಂತೆ ಸರ್ವಸ್ವವನ್ನು ತ್ಯಜಿಸಿ ವನವಾಸಕ್ಕೆ ತೆರಳಿದನು. ಈ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದರೂ ತನ್ನ ಕರ್ತವ್ಯ ಹಾಗೂ ಆದರ್ಶದಿಂದ ವಿಚಲಿತನಾಗಲಿಲ್ಲ ಎಂದರು. ಅಂತಿಮವಾಗಿ ಅಯೋಧ್ಯೆಯ ಸಿಂಹಾಸನವನ್ನು ಅಲಂಕರಿಸಿ ಸಾರ್ವಕಾಲಿಕ ಶ್ರೇಷ್ಠವಾದ ‘ರಾಮರಾಜ್ಯ’ವನ್ನು ಸ್ಥಾಪಿಸಿದನು. ರಾಮನ ಈ ಆದರ್ಶ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಆಶೀರ್ವಚನದ ಮೂಲಕ ವಿವರಿಸಿದರು. ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯರು, ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವಿನಾಯಕ ಭಟ್ ಗುಂಜಗೋಡು ಕಾರ್ಯಕ್ರಮ ನಿರ್ವಹಿಸಿದರು.
