ಸುದ್ದಿ ಕನ್ನಡ ವಾರ್ತೆ
​ದಾಂಡೇಲಿ: ನಗರದಿಂದ ಹಸನಾಳಕ್ಕೆ ಸಂಪರ್ಕ ಕಲ್ಪಿಸುವ ಟಿ.ಆರ್.ಟಿ. ರಸ್ತೆ ಬಳಿ ಕಪ್ಪು ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ಟಿ.ಆರ್.ಟಿ.ಯಿಂದ ಹಸನಾಳಕ್ಕೆ ತೆರಳುವ ರೈಲ್ವೆ ಹಳಿಯ ಸಮೀಪ ಚಿರತೆ ಕಾಣಿಸಿಕೊಂಡಿದೆ.

​ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಕಪ್ಪು ಚಿರತೆಯ ಸಂಚಾರ ಕಂಡುಬರುತ್ತಿದೆ. ಎರಡು ದಿನಗಳ ಹಿಂದೆ ಹೋಂಸ್ಟೇಗೆ ನುಗ್ಗಿದ ಚಿರತೆ ಜರ್ಮನ್ ಶೆಫರ್ಡ್ ತಳಿಯ ನಾಯಿಯೊಂದನ್ನು ಕೊಂದು ಹಾಕಿತ್ತು. ಈ ಘಟನೆಗಳಿಂದ ಸ್ಥಳೀಯರ ಸಾಕುಪ್ರಾಣಿಗಳು ಹಾಗೂ ಜಾನುವಾರುಗಳಿಗೆ ತೊಂದರೆಯಾಗುತ್ತಿದ್ದು, ಕಪ್ಪು ಚಿರತೆಯ ಹಾವಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.

​ಈಗಾಗಲೇ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ ಕೆ.ಸಿ. ಹಾಗೂ ಸಹಾಯಕರ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಕಳ್ಳಿಮಠ ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಗುರುಪ್ರಸಾದ ನೇತೃತ್ವದ ಅರಣ್ಯ ಸಿಬ್ಬಂದಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

​ಸ್ಥಳೀಯ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಹಾಗೂ ರಾತ್ರಿ ವೇಳೆ ಹೊರಗೆ ಓಡಾಡದಂತೆ ಅರಣ್ಯ ಇಲಾಖೆ ಜಾಗೃತಿ ಮೂಡಿಸಿದೆ. ರಾತ್ರಿ ವೇಳೆ ಒಂಟಿಯೇ ಹೊರಗೆ ಹೋಗದಿರುವುದು, ಮಕ್ಕಳನ್ನು ಹಾಗೂ ಸಾಕುಪ್ರಾಣಿಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.