Banner Ad

ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ:ಪಟ್ಟಣ ಪಂಚಾಯತ ವ್ಯಾಪ್ತಿಯ ಪುಡಿಗಾಸಿನ ಆಸೆಗಾಗಿ ವೃದ್ಧೆ ಹಾಗೂ ಪಿಗ್ಮಿ ಕಲೆಕ್ಟರ್ ಗೀತಾ ಪ್ರಭಾಕರ ಹುಂಡೇಕರ್ ಅವರನ್ನು ಅಮಾನುಷವಾಗಿ ಕೊಲೆ ಮಾಡಿ, ಬಂಗಾರ ಹಾಗೂ ಹಣ ದೋಚಿದ್ದ ಆರೋಪಿಗೆ ಶಿರಸಿಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

Banner Ad

ಸಿದ್ದಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಬಸವನಗಲ್ಲಿಯ ನಿವಾಸಿಯಾಗಿದ್ದ ಗೀತಾ ಹುಂಡೇಕರ (75) ವಿನಾಯಕ ಸೌಹಾರ್ದ ಸೊಸೈಟಿಯಲ್ಲಿ
ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಒಬ್ಬರೇ ವಾಸವಾಗಿದ್ದ ಇವರು ಪ್ರತಿದಿನ ನಗರದಲ್ಲಿ ಸಂಚರಿಸಿ ಸಂಗ್ರಹಿಸುತ್ತಿದ್ದ ಪಿಗ್ಮಿ ಹಣದ ಮೇಲೆ ಕಣ್ಣಿಟ್ಟಿದ್ದ ಆರೋಪಿ ಅಭಿಜಿತ ಗಣಪತಿ ಮಡಿವಾಳ, ಅವರನ್ನು ಕೊಲೆ ಮಾಡಿ ಹಣ ಲೂಟಿ ಮಾಡಲು ಸಂಚು ರೂಪಿಸಿದ್ದ.
23-12-2024ರಂದು ರಾತ್ರಿ ಆರೋಪಿ ಅಭಿಜಿತ ಮಡಿವಾಳ, ಗೀತಾ ಹುಂಡೇಕರ ಅವರ ಮನೆಯ ಹಿಂಭಾಗದ ಹಂಚು , ತೆಗೆದು ಬಚ್ಚಲು ಮನೆಯ ಮೂಲಕ ಒಳನುಗ್ಗಿ ಗೀತಾ ಅವರ ಕುತ್ತಿಗೆಯನ್ನು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಮೃತಳ ಕಿವಿಯಲ್ಲಿದ್ದ ಬಂಗಾರದ ಓಲೆಗಳು, ರೋಲ್ಡ್ ಗೋಲ್ಡ್ ಬಳೆಗಳು ಹಾಗೂ ಪಿಗ್ಮಿ ಯಿಂದ ಸಂಗ್ರಹಿಸಿದ್ದ ಒಟ್ಟು 21,680 ಹಣವನ್ನು ಕಳವು ಮಾಡಿ ಪರಾರಿಯಾಗಿದ್ದ. ಸಿದ್ದಾಪುರ ಪೊಲೀಸ್ ನಿರೀಕ್ಷಕ ಜೆ.ಬಿ. ಸೀತಾರಾಮ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿ ವಿಚಾರಣೆಯ ಸಮಯದಲ್ಲಿ ಎ.ಎಸ್‌.ಐ ಗಣಪತಿ ಭಂಟ್ ಅವರು ಸಾಕ್ಷಿಗಳನ್ನು ಸಮಯೋಜಿತವಾಗಿ ಹಾಜರುಪಡಿಸುವಲ್ಲಿ ಸಹಕರಿಸಿದ್ದರು.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರೋಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ಸುದೀರ್ಘ ವಾದ ಮಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೋರಿದ್ದರು. ಶಿರಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಪ್ರಕರಣದ ವಿಚಾರಣೆ ನಡೆಸಿದರು. ಹೊಸ ಕಾನೂನು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕೇವಲ 5 ರಿಂದ 6 ತಿಂಗಳ ಅತ್ಯಲ್ಪ ಅವಧಿಯಲ್ಲಿ ಸಾಕ್ಷಿ ವಿಚಾರಣೆ ಪೂರೈಸಿ ಅಭಿಯೋಜನೆಯು ಆರೋಪವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಯಿತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿ ಅಭಿಜಿತ ಮಡಿವಾಳನನ್ನು ದೋಷಿ ಎಂದು ತೀರ್ಮಾನಿಸಿ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 32,000 ರೂ. ದಂಡ ವಿಧಿಸಿದ್ದಾರೆ.ಅಲ್ಲದೇ ಮೃತಳ ಅವಲಂಬಿತ ಮಕ್ಕಳಿಗೆ 50,000 ಪರಿಹಾರ ನೀಡಲು ಹಾಗೂ ಹೆಚ್ಚುವರಿ ಪರಿಹಾರವನ್ನು ಜಿಲ್ಲಾ ಉಚಿತ ಸೇವಾ ಕಾನೂನು ಪ್ರಾಧಿಕಾರದಿಂದ ಪಡೆಯಲು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ.

Banner Ad