ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದ ಕಾರ್ಯಕ್ರಮ ಬುಧವಾರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಆನಂದ ಪಿ. ರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಏಳನೇಯ ತರಗತಿಯ ವಿದ್ಯಾರ್ಥಿಗಳು ಸ್ವಾಗತ,ಪ್ರಾರ್ಥನೆ ಗೀತೆಯನ್ನು ಹಾಡಿದರು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾದೇವತೆಯಾದ ಶಾರದಾ ಮಾತೆಯ ಭಾವಚಿತ್ರದ ಪೂಜನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ ಸರ್ ಮಾತನಾಡಿ ಕಳೆದ ಏಳು ವರ್ಷಗಳಿಂದ ತಾವು ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ್ದೀರಿ, ಮುಂದಿನ ಪ್ರೌಢಶಾಲೆಯ ಹಂತದ ಶಿಕ್ಷಣಕ್ಕಾಗಿ ಹೋಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ತಾವುಗಳು ಶಿಸ್ತು,ಸಮಯ ಪ್ರಜ್ಞೆ,ಸಂಯಮ, ಕಠಿಣ ಪರಿಶ್ರಮ,ಉತ್ತಮ ಸಂಸ್ಕಾರಗಳನ್ನು ನಿರಂತರ ಉಳಿಸಿಕೊಂಡು ಎಲ್ಲರೂ ಸಮಾಜದ ಉಪಯೋಗಿ ನಾಗರೀಕರಾಗಿ ಬದುಕಬೇಕು, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ, ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಮಾತನಾಡಿ ನಮ್ಮ ಶಾಲೆಯ ಎಲ್ಲಾ ಶೈಕ್ಷಣಿಕ ವಿಭಾಗದ ಚಟುವಟಿಕೆಗಳಲ್ಲಿ ಪ್ರತಿಭಾ ಕಾರಂಜಿ, ಕ್ರೀಡಾಕೂಟದಲ್ಲಿ ಭಾಗವಹಿಸಿ, ಉತ್ತಮ ಸಾಧನೆ ಮಾಡಿ ಶಾಲೆಯ,ಊರಿನ, ಶಿಕ್ಷಕರ, ಪಾಲಕರ,ಪೋಷಕರ ಕೀರ್ತಿಯನ್ನು ಹೆಚ್ಚಿಸಿದ್ದೀರಿ, ಶೈಕ್ಷಣಿಕ ತರಗತಿಗಳನ್ನು ಮತ್ತು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಸೇರಿದಂತೆ ವಾರ್ಷಿಕ ಕ್ರೀಯಾಯೋಜನೆಯ ಪ್ರಕಾರ ಎಲ್ಲಾ ಚಟುವಟಿಕೆಗಳನ್ನು ಮಾಡಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿ ಮಕ್ಕಳ ಸರ್ವೋತೊಮುಖ ಬೆಳವಣಿಗೆ ಆಗಲು ಶ್ರಮವಹಿಸಿದ್ದೇವೆ.ಮುಂದಿನ ಪ್ರೌಢಶಾಲೆಯ ಹಂತದಲ್ಲಿಯೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಇನ್ನೂ ಹೆಚ್ಚಿನ ಸಾಧನೆ ಮಾಡಿ ತನ್ಮೂಲಕ ಎಲ್ಲರ ಕೀರ್ತಿಯನ್ನು ಬೆಳಗಿಸಿ, ಸಮಾಜದಲ್ಲಿ ಸಂಸ್ಕಾರಯುತ ಶಿಕ್ಷಣ ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಗೌರವಯುತ ವ್ಯಕ್ತಿಗಳಾಗಿ ಬದುಕಬೇಕು.ಅದುವೇ ನಮಗೆ ನೀವು ನೀಡುವ ಗುರುಕಾಣಿಕೆ, ಕಲಿತ ಶಾಲೆಯನ್ನು ಕಲಿಸಿದ ಗುರುವನ್ನು ಗೌರವದಿಂದ ಕಾಣಬೇಕು ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿಂದೋಳಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ ಮಾತನಾಡಿ ಏಳು ವರ್ಷ ತಾವು ವಿದ್ಯಾಭ್ಯಾಸ ಮಾಡಿ ಮುಂದಿನ ವಿದ್ಯಾಭ್ಯಾಸಕ್ಕೆ ತಾವು ಹೋಗುತ್ತಿದ್ದೀರಿ ಒಳ್ಳೆಯ ರೀತಿಯಿಂದ ಸಮಾಜದಲ್ಲಿ ಬದುಕಲು ಕಲಿಯಿರಿ, ಶಿಕ್ಷಕರಿಗೆ ಗೌರವವನ್ನು ನೀಡಬೇಕು ಏಕೆಂದರೆ ನಿಮಗೆ ಏಳು ವರ್ಷಗಳ ಕಾಲ ಶಿಕ್ಷಣವನ್ನು ನೀಡಿ ನಿಮ್ಮ ಏಳಿಗೆಯನ್ನು ಬಯಸಿದವರು ಶಿಕ್ಷಕರಾಗಿದ್ದಾರೆ. ಉತ್ತಮ ಫಲಿತಾಂಶ ನೀಡಲು ಪ್ರಯತ್ನ ಮಾಡಬೇಕು ನೀವೆಲ್ಲ ಬಹಳ ಪುಣ್ಯ ಮಾಡಿದ್ದೀರಿ ಏಕೆಂದರೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು ಪಡೆದುಕೊಂಡು ಕಲಿಯುತ್ತಿರುವುದು. ಎಲ್ಲಾ ಶಿಕ್ಷಕರಿಗೆ ಮತ್ತು ತಂದೆ ತಾಯಿಗಳಿಗೆ ಗೌರವ ಕೊಡಬೇಕು. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹನುಮಾನಲೇನ್ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರು ಮಾತನಾಡಿ ಮುಂದಿನ ಪ್ರೌಢಶಾಲೆಯ ಶಿಕ್ಷಣ ಪಡೆಯಲು ಹೋಗುತ್ತಿರುವ ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಸಹ ಶಿಕ್ಷಕರಾದ ಆನಂದ ಪಿ ಯವರು ಮಾತನಾಡಿ ನಮ್ಮೆಲ್ಲರ ಮಾರ್ಗದರ್ಶನ ಹಾಗೂ ಪಾಲಕರ ಸಹಕಾರದಲ್ಲಿ ಉತ್ತಮ ಶಿಕ್ಷಣ ಪಡೆದಿದ್ದೀರಿ, ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿದರು. ಶಾಲೆಯ ಸಹ ಶಿಕ್ಷಕಿಯಾದ ವಿದ್ಯಾ ಮೇಡಂ,ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ತನುಜಾ ಮಸೂರಕರ, ಸರ್ವ ಸದಸ್ಯರು ಶುಭ ಹಾರೈಸಿದರು. ವಿದ್ಯಾರ್ಥಿಗಳು ತಮ್ಮ ಏಳು ವರ್ಷಗಳಿಂದ ಶಾಲೆಯಲ್ಲಿ ಪಡೆದ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಪಂಚೆ,ಅಂಗಿ ವಿದ್ಯಾರ್ಥಿನಿಯರು ಸೀರೆ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಏಳನೇಯ ತರಗತಿಯ ವಿದ್ಯಾರ್ಥಿಗಳು ತಮ್ಮ- ತಮ್ಮ ಪಾಲಕರ ಪಾದ ಪೂಜೆಯನ್ನು ಮಾಡಿ ಆರತಿ ಮಾಡಿ ಆಶೀರ್ವಾದ ಪಡೆದುಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕಿಯಾದ ವಿದ್ಯಾ ಮೇಡಂ ಎಲ್ಲರನ್ನು ವಂದಿಸಿದರು.
