ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ವಿದ್ಯಾರ್ಥಿ ನಾಯಕತ್ವ, ಕ್ರೀಡಾ ಸಾಧನೆ ಹಾಗೂ ಸಮಾಜಸೇವೆಯ ಮೂಲಕ ಗುರುತಿಸಿಕೊಂಡಿರುವ ವಿಠ್ಠು ಬಮ್ಮು ಶೇಳ್ಕೆ ಅವರು ಕರ್ನಾಟಕ ಪ್ರೀಮಿಯರ್ ಲೀಗ್ (KPL) ಕಬಡ್ಡಿ ಟೂರ್ನಿಯಲ್ಲಿ ಉತ್ತರ ಕನ್ನಡ ತಂಡದ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಿರುವ ಅವರು, ಪಿಯುಸಿ ಹಾಗೂ ಪದವಿ ಶಿಕ್ಷಣದ ಅವಧಿಯಲ್ಲಿ ಜನರಲ್ ಸೆಕ್ರೆಟರಿ (GS) ಆಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳ ವಿಶ್ವಾಸ ಗಳಿಸಿದ್ದರು. ಶಾಲೆ ಮತ್ತು ಕಾಲೇಜು ದಿನಗಳಿಂದಲೇ ಕಬಡ್ಡಿಯ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು, ಹಲವು ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ಯೂನಿವರ್ಸಿಟಿ ಬ್ಲೂ ಗೌರವಕ್ಕೂ ಪಾತ್ರರಾಗಿ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಸಮಾಜಸೇವೆಯಲ್ಲೂ ಸಕ್ರಿಯರಾಗಿರುವ ವಿಠ್ಠು ಬಮ್ಮು ಶೇಳ್ಕೆ ಅವರು ಗ್ರಾಮೀಣ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಹಾಗೂ ಜನಪ್ರತಿನಿಧಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿ ಜನಮನ್ನಣೆ ಗಳಿಸಿದ್ದಾರೆ.
ಈಗ ಕರ್ನಾಟಕ ಪ್ರೀಮಿಯರ್ ಲೀಗ್ ಕಬಡ್ಡಿಯಲ್ಲಿ ಉತ್ತರ ಕನ್ನಡ ತಂಡದ ಮ್ಯಾನೇಜರ್ ಆಗಿ ಆಯ್ಕೆಯಾಗಿರುವುದು ಜಿಲ್ಲೆಯ ಕ್ರೀಡಾಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಭಾರತ ಕಬಡ್ಡಿ ತಂಡ ಹಾಗೂ ಪ್ರೊ ಕಬಡ್ಡಿ ಲೀಗ್‌ನಂತಹ ಉನ್ನತ ಮಟ್ಟದ ಜವಾಬ್ದಾರಿಗಳಿಗೂ ಅವರು ಆಯ್ಕೆಯಾಗಲಿ ಹಾಗೂ ಅವರ ಮಾರ್ಗದರ್ಶನದಿಂದ ಗ್ರಾಮೀಣ ಭಾಗದ ಪ್ರತಿಭಾವಂತ ಕಬಡ್ಡಿ ಆಟಗಾರರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿ ಎಂದು ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.
