ಸುದ್ದಿ ಕನ್ನಡ ವಾರ್ತೆ
​ಕಾರವಾರ: ಚೀನಾದಲ್ಲಿ ಇತ್ತೀಚೆಗೆ ನಡೆದ 23 ವರ್ಷದೊಳಗಿನ ಅಥ್ಲೆಟಿಕ್ ಚಾಂಪಿಯನ್ ಷಿಪ್ ನ 5,000 ಮತ್ತು 10,000 ಮೀ. ನಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರ, ರಾಜ್ಯ ಮತ್ತು ಜಿಲ್ಲೆಯ ಕೀರ್ತಿಯನ್ನು ಬೆಳಗಿರುವ ಜಿಲ್ಲೆಯ ಹಳಿಯಾಳ ತಾಲೂಕಿನ ಬೆಳವಟಗಿ ಗ್ರಾಮದ ಕ್ರೀಡಾಪಟು ಶಿವಾಜಿ ಪರಶುರಾಮ ಮಾದಪ್ಪನ ಗೌಡ ಅವರ ಸಾಧನೆ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಲಿ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.

​ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಕ್ರೀಡಾಪಟು ಶಿವಾಜಿ ಅವರಿಗೆ ಅವರ ಸಾಧನೆಯನ್ನು ಅಭಿನಂದಿಸಿ ಜಿಲ್ಲಾಡಳಿತದ ಮೂಲಕ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

​ಹಳಿಯಾಳ ತಾಲೂಕಿನ ಸಣ್ಣ ಪ್ರದೇಶದಿಂದ ಬಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಸಾಧನೆ ಮಾಡಿರುವುದು ನಮ್ಮೆಲ್ಲರಿಗೂ ಹಾಗೂ ಇಡೀ ಜಿಲ್ಲೆಗೆ ಅತ್ಯಂತ ಹೆಮ್ಮೆಯ ವಿಷಯವಾಗಿದ್ದು, ಜಿಲ್ಲೆಯನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಕ್ರೀಡಾಪಟು ಶಿವಾಜಿ ಅವರು ಶಿಸ್ತು ಮತ್ತು ದಿನನಿತ್ಯದ ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದು, ಅವರ ಸಾಧನೆಗಳು ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಮತ್ತು ಶಿವಾಜಿ ಅವರಿಗೆ ಮುಂದಿನ ಎಲ್ಲಾ ಕ್ರೀಡಾ ಪಯಣಕ್ಕೂ ಅಗತ್ಯವಿರುವ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ಜಿಲ್ಲಾಡಳಿತದ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
​ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಪ್ ಶಶಿ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡುವಂತಹ ಪ್ರಾಕೃತಿಕ ವಾತಾವರಣವಿದ್ದು, ಕಾರವಾರದ ಜಿಲ್ಲಾ ಕ್ರೀಡಾಂಗಣವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಪೋಷಕರು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ವಿದ್ಯಾರ್ಥಿಗಳು ಪಠ್ಯದಲ್ಲಿ ಮಾತ್ರವಲ್ಲದೇ ಕ್ರೀಡೆ ಮತ್ತು ಸಾಂಸ್ಕೃತಿಕ ರಂಗದಲ್ಲೂ ಕೂಡ ತೊಡಗಿಸಿಕೊಳ್ಳಬೇಕು ಎಂದರು.ಜಿಲ್ಲಾಡಳಿತ ಅಭಿನಂದನೆ ಸ್ವೀಕರಿಸಿ ಮಾತನಾಡಿದ, ಕ್ರೀಡಾಪಟು ಶಿವಾಜಿ ಅವರು, ಉತ್ತರ ಕನ್ನಡ ಜಿಲ್ಲೆಯ ಮಕ್ಕಳಿಗೆ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಪ್ರತಿಭೆ ಇದ್ದು, ಅವರಿಗೆ ಅಭ್ಯಾಸ ಮಾಡಲು ಕಾರವಾರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಗತ್ಯ ಸುಸಜ್ಜಿತ ಸೌಲಭ್ಯಗಳನ್ನು ಒದಗಿಸಬೇಕು.

 

ಸತತ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ಕಾಳಜಿಯಿಂದ ಸಾಧನೆಗಳನ್ನು ಮಾಡಲು ಸಾಧ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಕಾಮನ್ ವೆಲ್ತ್, ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್ ನಲ್ಲಿ ಪದಕ ಪಡೆಯುವ ಗುರಿಯನ್ನು ಹೊಂದಿದ್ದು, ಜಿಲ್ಲೆಗೆ ಮತ್ತು ದೇಶಕ್ಕೆ ಇನ್ನೂ ಉತ್ತಮ ಸಾಧನೆ ಮಾಡುತ್ತೇನೆ ಎಂದರು.

​ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯ್ಕ ಇದ್ದರು.
​ಆರಂಭಿಕ ಹಂತದಲ್ಲಿ ಶಿವಾಜಿ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಕೋಚ್ ಪ್ರಕಾಶ್ ಅವರಿಗೆ ಅಭಿನಂದಿಸಲಾಯಿತು. ಕಾರವಾರದ ರೋಟರಿ ಸೀ ಸ್ಕ್ವೇರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಶಿವಾಜಿ ಅವರನ್ನು ಅಭಿನಂದಿಸಿ, ನಗದು ಬಹುಮಾನ ನೀಡಲಾಯಿತು.