ಸುದ್ದಿ ಕನ್ನಡ ವಾರ್ತೆ

ಜೋಯಿಡಾ ,ಕಸ್ತೂರಿ ರಂಗನ್ ವರದಿ ಪುನರ್ ಪರಿಶೀಲನೆಗೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಅಫೀಲ್ ಹಾಕಲು ಕರ್ನಾಟಕ ಪ್ರಾಂತೀಯ ರೈತ ಸಂಘದ ಜೋಯಿಡಾ ಘಟಕ ದಿಂದ ಮುಖ್ಯ ಮಂತ್ರಿ ಗಳಿಗೆ ತಾಲೂಕಾ ತಹಸೀಲ್ದಾರ್ ಮೂಲಕ ಇಂದು ಮನವಿ ಸಲ್ಲಿಸಲಾಯಿತು.

ಸರಕಾರಕ್ಕೆ ಕೊಟ್ಟ ಮನವಿಯಲ್ಲಿ.,ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (Eco-Sensitive Area) ವ್ಯಾಪ್ತಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಏಳನೇ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರ ತಕರಾರು ಸಲ್ಲಿಸಬೇಕು , ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜೋಯಡಾ ತಾಲ್ಲೂಕು ಸಮಿತಿಯಿಂದ ಒತ್ತಾಯಿಸಿ ಈ ಮನವಿ ಸಲ್ಲಿಸಲಾಗುತ್ತಿದೆ.,ಜೊತೆಗೆ
ಪಶ್ಚಿಮಘಟ್ಟದಲ್ಲಿ ವಾಸಿಸುವ ಜನರಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಆತಂಕ ಮೂಡಿದ್ದು, ಅವರ ಜೀವನೋಪಾಯ ಹಾಗೂ ಹಿತಾಸಕ್ತಿಗೆ ಧಕ್ಕೆಯಾಗದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಒತ್ತಾಯಿಸಿದೆ.

 

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಕರ್ನಾಟಕ ಸರ್ಕಾರ ಕೇಂದ್ರದ ಪ್ರಸ್ತಾವನೆಗಳಿಗೆ ತಕರಾರು ಸಲ್ಲಿಸಿತ್ತು. ಪ್ರಸ್ತುತ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಕರಡು ಅಧಿಸೂಚನೆಗೂ ರಾಜ್ಯ ಸರ್ಕಾರ ತನ್ನ ಆಕ್ಷೇಪಣೆ ಸಲ್ಲಿಸಬೇಕು ಮತ್ತು ವೈಜ್ಞಾನಿಕ ತಳಹದಿಯಲ್ಲಿ ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.

ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡವು 2013ರಲ್ಲಿ ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ವರದಿ ಸಲ್ಲಿಸಿತ್ತು. ವರದಿಯಲ್ಲಿ ದೇಶದ ಆರು ರಾಜ್ಯಗಳ ಸುಮಾರು 56,000 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ಶಿಫಾರಸು ಮಾಡಲಾಗಿದ್ದು, ಕರ್ನಾಟಕದ 20,668 ಚದರ ಕಿ.ಮೀ. ಪ್ರದೇಶ ಇದರಲ್ಲಿ ಸೇರಿದೆ.

ಕೇಂದ್ರ ಸರ್ಕಾರವು 2026ರ ಜುಲೈ 27ರಂದು ಹೊರಡಿಸಿರುವ ಏಳನೇ ಕರಡು ಅಧಿಸೂಚನೆಯಡಿ ಕರ್ನಾಟಕದ ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಉಡುಪಿ ಸೇರಿದಂತೆ 10 ಜಿಲ್ಲೆಗಳ 39 ತಾಲ್ಲೂಕುಗಳ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಲು ಗುರುತಿಸಲಾಗಿದೆ.
ಕರಡು ಅಧಿಸೂಚನೆಯಡಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರಗಳು ಹಾಗೂ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಕಟ್ಟಡ ಮತ್ತು ಟೌನ್‌ಶಿಪ್ ಅಭಿವೃದ್ಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಸ್ತಾಪಿಸಲಾಗಿದೆ. ಕೃಷಿ, ನೆಡುತೋಪು ಸೇರಿದಂತೆ ಜನರ ದೈನಂದಿನ ಜೀವನಾಧಾರ ಚಟುವಟಿಕೆಗಳ ಮೇಲೆ ನಿರ್ದಿಷ್ಟ ಪರಿಣಾಮ ಬೀರಲಿದೆ.

ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿಅನುಷ್ಠಾನಗೊಳಿಸುವುದ ರಿಂದ ಈಗಾಗಲೇ ರಕ್ಷಿತ ಪ್ರದೇಶಗಳು, ಅಧಿಸೂಚಿತ ಅರಣ್ಯಗಳು ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸಲ್ಪಟ್ಟಿರುವ ಪ್ರದೇಶಗಳ ಮೇಲೆ ಹೆಚ್ಚುವರಿ ನಿರ್ಬಂಧಗಳು ಉಂಟಾಗಬಹುದು. ಇದರಿಂದ ಪಶ್ಚಿಮಘಟ್ಟದ ಜನರ ಜೀವನೋಪಾಯಕ್ಕೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಜುಲೈ 27 ರಂದು ಹೊರಡಿಸಿದ ಏಳನೆಯ ಪ್ರಸ್ತಾವನೆಗೆ ಆಕ್ಷೇಪಣೆ ಸಲ್ಲಿಸಲು 60 ದಿನದ ಅವಕಾಶವಿದೆ. ರಾಜ್ಯ ಸರಕಾರ ಆದಷ್ಟು ಬೇಗ ವಿಶೇಷ ವಿಧಾನಸಭಾ ಅಧಿವೇಶನ ಕರೆದು ಸೂಕ್ತ ರೀತಿಯಲ್ಲಿ ಚರ್ಚೆ ಮಾಡಿ ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿ ಪುನರ್ ಪರಿಶೀಲನೆಗೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ರಾಜ್ಯದ ಜನತೆಯ ಸ್ಪಷ್ಟ ನಿಲುವನ್ನು ತಿಳಿಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಜೋಯಡಾ ತಾಲ್ಲೂಕು ಸಮಿತಿ ಒತ್ತಾಯಿಸುತ್ತದೆ.

ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷರಾದ ಪ್ರೇಮಾನಂದ ವೆಲಿಪ,ಕಾರ್ಯದರ್ಶಿಗಳಾದ ರಾಜೇಶ ಗಾವಡಾ , ವಾಸುದೇವ ಮಿರಾಶಿ, ಖೇಮೋ ಮಿರಾಶಿ, ಸಂದೀಪ ವೆಲಿಪ್ , ವಿಭಾಕರ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು. ಅದೇ ರೀತಿಯಾಗಿ ವೈಯಕ್ತಿಕವಾಗಿ ಆಕ್ಷೇಪಣೆ ಅಂಚೆ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.