ಸುದ್ದಿ ಕನ್ನಡ ವಾರ್ತೆ
ಜಿಲ್ಲೆಯ ಮಳೆ ಮಾಪನ ಯಂತ್ರದ ದುಸ್ಥಿತಿಯಿಂದ ರೈತರಿಗೆ ಸಿಗಬೇಕಾದ ಬೆಳೆ ವಿಮೆ ಮೊತ್ತವು ಕಳೆದ ಎರಡು ವರ್ಷಗಳಿಂದ ಸರಿಯಾದ ಸಮಯಕ್ಕೆ ಸಿಗದೇ ಪರದಾಡುವಂತಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ಮಳೆ ಮಾಪನ ಯಂತ್ರವನ್ನು ದುರಸ್ತಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ರಾಜ್ಯ ಸರ್ಕಾರ ಟೆಂಡರ್ ಪ್ರಕ್ರಿಯೆ ನಡೆಸಿದೆ. ಆದರೆ ಇದುವರೆಗೂ ಯಾವ ಮಳೆ ಮಾಪನ ಯಂತ್ರದ ದುರಸ್ತಿ ಕಾರ್ಯವೂ ಆರಂಭ ಗೊಳ್ಳದೇ ಇರುವುದು ರೈತರ ಬೇಸರಕ್ಕೆ ಕಾರಣವಾಗಿದೆ.ಜಿಲ್ಲೆಯಲ್ಲಿನ ಹಲವಾರು ಮಳೆ ಮಾಪನ ಕೇಂದ್ರಗಳ ಅಸಮರ್ಪಕ ಕಾರ್ಯ ನಿರ್ವಹಣೆಯ ಪರಿಣಾಮದಿಂದಾಗಿ ಮತ್ತು ತಪ್ಪು ದತ್ತಾಂಶಗಳಿಂದಾಗಿ ರೈತರು ಬೆಳೆ ವಿಮೆ ಪಡೆಯಲು ವಿಳಂಬ ಹಾಗೂ ಕಡಿಮೆ ಪ್ರಮಾಣದಲ್ಲಿ ಬೆಳೆ ವಿಮೆ ಪಡೆಯುವಂತಾಗಿದೆ.
ಸ್ಥಳೀಯವಾಗಿ ಮಳೆಯಾಗಿದ್ದರೂ, ದೋಷದಿಂದಾಗಿ ಉತ್ತಮ ಮಾಪಕಗಳ ಸಮರ್ಪಕ ದತ್ತಾಂಶವೇ ಲಭ್ಯವಿರುತ್ತಿರಲಿಲ್ಲ . ಇದನ್ನೇ ನೆಪವಾಗಿಸಿಕೊಂಡ ವಿಮಾ ಕಂಪನಿಗಳು ರೈತರಿಗೆ ಕೋಟ್ಯಂತರ ರೂಪಾಯಿ ವಿಮಾ ಮೊತ್ತ ನೀಡಲು ತೀವ್ರ ವಿಳಂಬ ನೀತಿ ಅನುಸರಿಸಿ ವಂಚಿಸಲು ಯತ್ನಿಸಿದ್ದವು. ತದನಂತರ ಸರ್ಕಾರದ ಮಧ್ಯಸ್ಥಿಕೆ ಹಾಗೂ ಸರಣಿ ಪ್ರತಿಭಟನೆಗಳ ಒತ್ತಡದಿಂದಾಗಿ ಮೊತ್ತ ವಿತರಿಸಲಾಗಿತ್ತು.ಅದೂ ಕೂಡ ಕಡಿಮೆ ಪ್ರಮಾಣದಲ್ಲಿ,ಮಳೆ ಮಾಪನಗಳ ಅವ್ಯವಸ್ಥೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕಾರಣ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಬಾಕಿ ಇರುವ ಎಲ್ಲಾ ಮಳೆ ಮಾಪನ ಕೇಂದ್ರಗಳ ತುರ್ತು ದುರಸ್ತಿಗಾಗಿ ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿತ್ತು. ಆದರೆ, ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯು ತಾಲ್ಲೂಕಿನಲ್ಲಿ ‘ಕನಿಷ್ಠ ದುರಸ್ತಿ ಕಾರ್ಯವನ್ನೂ ಆರಂಭಿಸದೇ ಸಂಪೂರ್ಣ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಈ ಕುರಿತು ಸಂಬಂಧಪಟ್ಟ ಗುತ್ತಿಗೆ ಕಂಪನಿಯನ್ನು ಸಂಪರ್ಕಿಸಿದರೆ, ‘ರಾಜ್ಯಾದ್ಯಂತ ೨ ಸಾವಿರಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳ ದುರಸ್ತಿ ಬಾಕಿ ಇದೆ, ಹೀಗಾಗಿ ವಿಳಂಬವಾಗುವ ಸಾಧ್ಯತೆಯಿದೆ’ ಎಂಬ ಹಾರಿಕೆ ಹಾಗೂ ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ.
ಕಂಪನಿಯ ಈ ಉಡಾಫೆ ವರ್ತನೆ ರೈತರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ’ ಎಂಬುದು ರೈತರ ದೂರಾಗಿದೆ.
‘ಪ್ರಸ್ತುತ ಮಳೆಗಾಲದ ನಿರ್ಣಾಯಕ ಅವಧಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಬೆಳೆ ವಿಮೆ ಪಡೆಯುವಲ್ಲಿ ವಿಮಾ ಕಂಪನಿಗಳಿಗೆ ಮತ್ತೊಮ್ಮೆ ರೈತರನ್ನು ಶೋಷಿಸಲು ಹಾದಿ ಮಾಡಿಕೊಟ್ಟಂತಾಗುತ್ತದೆ. ಜಿಲ್ಲಾದ್ಯಂತ ೧೦೦ಕ್ಕೂ ಹೆಚ್ಚು ಘಟಕಗಳ ದುರಸ್ತಿ ಆಗಬೇಕಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಕೆಎಎನ್‌ಎಂಡಿಸಿ ತಕ್ಷಣವೇ ಎಚ್ಚೆತ್ತುಕೊಂಡು, ಗುತ್ತಿಗೆ ಸಂಸ್ಥೆಗೆ ತ್ವರಿತ ಕಾಮಗಾರಿಗೆ ಆದೇಶಿಸಬೇಕು ಎಂಬುದು ರೈತರು ಹಾಗೂ ರೈತ ಪರ ಸಂಘಟನೆಗಳ ಒತ್ತಾಯವಾಗಿದೆ.
ಮಳೆ ಮಾಪನ ಯಂತ್ರದ ದುಸ್ಥಿತಿಯಿಂದ ರೈತರಿಗೆ ಸಿಗಬೇಕಾದ ಬೆಳೆ ವಿಮೆಯು ಸರಿಯಾದ ಸಮಯದಲ್ಲಿ ಸಿಗುತ್ತಿಲ್ಲ. ಹೋರಾಟ ಮಾಡಿಯೇ ಕಂಪನಿ ಕೊಟ್ಟಷ್ಟು ವಿಮಾ ಮೊತ್ತವನ್ನು ರೈತರು ಪಡೆಯುವಂತಾಗಿದೆ. ಮಳೆ ಮಾಪನ ಯಂತ್ರದ ದುರಸ್ತಿ ಕಾರ್ಯದ ಜವಾಬ್ದಾರಿ ಹೊತ್ತ ಕಂಪನಿಯ ಮೇಲೆ ಸರ್ಕಾರ ಒತ್ತಡ ಹಾಕುವ ಅವಶ್ಯಕತೆ ಇದೆ.ಪ್ರತಿ ತಾಲೂಕಿನ ಆಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂಬ ಒತ್ತಾಯ ರೈತ ವಲಯದಿಂದ ಕೇಳಿ ಬರುತ್ತಿದೆ.
