ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ಇವರ ಸಂಯುಕ್ತಾಶ್ರಯದಲ್ಲಿ ಜೋಯಿಡಾ ತಾಲೂಕಿನಲ್ಲಿರುವ ಮುರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಪೋಕ್ಸೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ ವಿಷಯಗಳ ಕುರಿತು ಅರಿವು ಕಾರ್ಯಕ್ರಮವನ್ನು ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳು ಈ ದೇಶದ ಸಂಪತ್ತು, ಮಕ್ಕಳನ್ನು ಕಾಪಾಡುವ ಜವಾಬ್ದಾರಿ ನಮ್ಮ ಸಮಾಜದ ಮೇಲಿದೆ. ಆದ್ದರಿಂದ ಮಕ್ಕಳನ್ನು ಕಾಪಾಡುವುದು ಅಥವಾ ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂತಹ ಅರಿವು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕೆಂದರು.
ಜೋಯಿಡಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದಲಿಂಗಪ್ಪ ಕೆ ಮಾತನಾಡಿ ಮಕ್ಕಳ ಕಾನೂನು, ಮಕ್ಕಳಿಗಿರುವ ಹಕ್ಕುಗಳು ಮತ್ತು ಸೌಲಭ್ಯಗಳು ಸಿಗಲೇಬೇಕು. ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗಬಾರದು. ಮಕ್ಕಳ ರಕ್ಷಣೆ ಮಾಡುವುದು ಎಲ್ಲಾ ಇಲಾಖೆಗಳು ಪೋಷಕರು ಮತ್ತು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗುತ್ತದೆ ಎಂದು ತಿಳಿಸಿದರು.ಉಪನ್ಯಾಸಕರಾಗಿ ಆಗಮಿಸಿರುವ ಮಹೇಶ ಜಿ ಅವರು ಮಕ್ಕಳು ಘನತೆಯ ಬದುಕನ್ನು ಕಟ್ಟಿಕೊಳ್ಳಬೇಕಾದರೆ ನಾವು ಯಾವ ಮಾರ್ಗದಲ್ಲಿ ಸಾಗಬೇಕು ಹಾಗೂ ಮಕ್ಕಳಿಗಿರುವ ಹಕ್ಕುಗಳ ಕುರಿತು, ಪೋಕ್ಸೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಬಾಲ್ಯ ವಿವಾಹದ ನಿಷೇಧ ಕಾಯ್ದೆ, ಕುರಿತು ಹೇಳುತ್ತಾ ಮಕ್ಕಳ ಬದುಕು ಅರಳು ಮಲ್ಲಿಗೆ ರೀತಿಯಲ್ಲಿ ಅರಳಬೇಕೆ ಹೊರತು ಮುದುಡಿದ ಹೂವಿನ ರೀತಿಯ ಬದುಕಾಗಬಾರದು ಬದುಕಿನ ಮೌಲ್ಯವನ್ನು ತಿಳಿಸುತ್ತಾ ಉದಾಹರಣೆಯೊಂದಿಗೆ ತುಂಬಾ ಮಾರ್ಮಿಕವಾಗಿ ಮಾತನಾಡಿ ಮಕ್ಕಳಿಗೆ ಮನಮುಟ್ಟುವ ಹಾಗೂ ಅರ್ಥೈಸಿಕೊಳ್ಳುವ ರೀತಿಯಲ್ಲಿ ಪಿಪಿಟಿ ಮುಖಾಂತರ ವಿಷಯವನ್ನು ಬಿತ್ತರಪಡಿಸಿದರು. ಜೊತೆಗೆ ಮಕ್ಕಳಿಗೆ ಬಾಲ ನ್ಯಾಯ ಕಾಯ್ದೆಯ ಕಿರು ಪುಸ್ತಕವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಮಂಜುಳಾ ಪಾಟೀಲ್ ಇತರರು ಇದ್ದರು,ಕಾರ್ಯಕ್ರಮದಲ್ಲಿ 250 ವಿದ್ಯಾರ್ಥಿಗಳು ಹಾಜರಿದ್ದರು.
