Banner Ad

ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ತಾಲೂಕಿನ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ ಹೊಂಡಗಳಿಂದ ಬೇಸತ್ತು ವಜ್ರಳ್ಳಿ ಸಮೀಪದ ಕೆಳೆಮನೆ ಕ್ರಾಸ್ ಬಳಿ ರಸ್ತೆಯ ಹೊಂಡದಲ್ಲಿ ಬಾಳೆಗಿಡ ನೆಟ್ಟು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
​ತಾಲೂಕಿನಲ್ಲಿ ಚಿನ್ನಾಪುರ ಕ್ರಾಸ್‌ನಿಂದ ಬಾರೆಯವರೆಗೆ ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಉಂಟಾಗಿವೆ.

ತಿರುವುಗಳಿಂದಲೇ ಕೂಡಿದ ದಾರಿಯಲ್ಲಿ ಹೊಂಡಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸುವುದು ಸವಾಲಿನ ಕಾರ್ಯವಾಗಿದೆ.

Banner Ad

​ಹೀಗಾಗಿ ಪದೇ ಪದೇ ರಸ್ತೆ ದುರಸ್ತಿಯ ಬಗ್ಗೆ ಸ್ಥಳೀಯರು ಒತ್ತಾಯಿಸುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ರಸ್ತೆ ನಿರ್ವಹಿಸುವ ಲೋಕೋಪಯೋಗಿ ಇಲಾಖೆ ಆಗಾಗ ಪ್ಯಾಚ್ ವರ್ಕ್ ಮಾಡಿ ಜನರ ಕಣ್ಣೊರೆಸುವ ಯತ್ನ ಮಾಡಿದರೂ, ಅದರಿಂದ ಸಮಸ್ಯೆ ಪರಿಹಾರವಾಗಿಲ್ಲ.

​ಹೀಗಾಗಿ ಗ್ರಾಮಸ್ಥರು ಕೆಳೆಮನೆ ಕ್ರಾಸ್ ಬಳಿ ರಸ್ತೆಯ ಹೊಂಡದಲ್ಲೇ ಬಾಳೆಗಿಡ ನೆಟ್ಟು ವ್ಯವಸ್ಥೆಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕಾಏಕಿ ರಸ್ತೆಯ ಹೊಂಡದಲ್ಲಿ ಬಾಳೆಗಿಡ ಪ್ರತ್ಯಕ್ಷವಾಗಿದೆ. ನೆಟ್ಟವರು ಯಾರು ಎಂಬುದು ತಿಳಿಯದಿದ್ದರೂ, ಇದು ವ್ಯವಸ್ಥೆಯ ವಿರುದ್ಧ ಆಕ್ರೋಶ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿದೆ.

​ರಸ್ತೆಯ ಮಧ್ಯದಲ್ಲಿ ಬಾಳೆಗಿಡ ನೆಟ್ಟಿರುವ ಫೋಟೊ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಲೋಕೋಪಯೋಗಿ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನಾದರೂ ರಸ್ತೆ ದುರಸ್ತಿಯ ಬಗ್ಗೆ ಗಂಭೀರವಾಗಿ ಕ್ರಮ ಆಗಬೇಕೆಂಬ ಆಗ್ರಹ ಮಾಡುತ್ತಿದ್ದಾರೆ.

Banner Ad