Banner Ad

ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿರುವ ಪ್ರತಿಯೊಬ್ಬರಿಗೂ ದಿ. ಸತೀಶ ಕಟ್ಟಿಗೆ ಅವರು ಪ್ರೇರಣೆಯಾಗಿದ್ದಾರೆ ಎಂದು ಸಂಘದ ಉತ್ತರ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದರು.

​ಅವರು ಪಟ್ಟಣದ ಅಡಿಕೆ ಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವದರ್ಶನ ಸೇವಾ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರಗಳ ಸಹಯೋಗದೊಂದಿಗೆ ಆರ್ ಎಸ್ ಎಸ್ ಪ್ರಚಾರಕ ದಿ. ಸತೀಶ ಕಟ್ಟಿಗೆ ಅವರ ನಾಲ್ಕನೇ ಪುಣ್ಯತಿಥಿಯ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿದರು.

Banner Ad

 

​ಕಟ್ಟಿಗೆ ಅವರ ಕಲ್ಮಶವಿಲ್ಲದ ಹೃದಯ, ಉಪಕಾರ ಮನೋಭಾವನೆ ಮತ್ತು ಸಮರ್ಪಣಾ ಭಾವ ಸದಾ ಸ್ಫೂರ್ತಿಯಾಗಿದೆ. ಸತೀಶ ಅವರಂತೆ ಸಮಾಜಕ್ಕಾಗಿ ಬದುಕುವ, ಸಮಾಜದ ಬಗ್ಗೆ ಸದಾ ಚಿಂತನೆ ನಡೆಸುವ ಭಾವನೆಯನ್ನು ಯುವ ಪೀಳಿಗೆಯವರಲ್ಲಿ ಮೂಡಿಸಲು ಇಂತಹ ಶಿಬಿರಗಳು ವೇದಿಕೆಯಾಗಲಿ ಎಂದ ಅವರು, ಸಮಾಜದಲ್ಲಿ ಬೇರೆಯವರಿಗಾಗಿ ಬದುಕಬಹುದು, ನಮ್ಮ ಅಂಗಾಂಗಗಳೂ ಇನ್ನೊಬ್ಬರ ಬದುಕಿಗೆ ಆಧಾರವಾಗಬುದೆಂಬ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
​ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ಅನೇಕ ರಾಷ್ಟ್ರಗಳು ಕೃತಕ ರಕ್ತದ ತಯಾರಿಕೆಗೆ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಿಲ್ಲ. ರಕ್ತದ ಅಗತ್ಯವಿದ್ದಾಗ ಇನ್ನೊಬ್ಬರ ರಕ್ತ ಪಡೆಯುವುದೊಂದೇ ಮಾರ್ಗ. ನಮ್ಮ ಕೇಂದ್ರದಿಂದ ಪ್ರತಿ ತಿಂಗಳು 2500 ಲೀಟರ್ ರಕ್ತವನ್ನು ಅಗತ್ಯವಿರುವವರಿಗೆ ನೀಡುತ್ತಿದ್ದೇವೆ. ರಕ್ತದ ಅಗತ್ಯತೆ ಇರುವ ರೋಗಿಗಳಿಗೆ ಅವರು ಇರುವ ಆಸ್ಪತ್ರೆಗೆ ರಕ್ತನಿಧಿ ಕೇಂದ್ರದಿಂದ ರಕ್ತ ತಲುಪಿಸುವ ರಕ್ತದೂತ ಸೇವೆಯನ್ನೂ ಆರಂಭಿಸಿದ್ದೇವೆ ಎಂದರು.

​ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಸಹಪ್ರಚಾರಕ ಓ.ರಾ ಶ್ರೀಧರ, ವಿಭಾಗ ಪ್ರಚಾರಕ ಗಣೇಶ, ದಾಂಡೇಲಿ ಜಿಲ್ಲಾ ಪ್ರಚಾರಕ ಶಶಿಕುಮಾರ, ಟಿಎಮ್‌ಎಸ್‌ ನಿರ್ದೇಶಕ ಕೃಷ್ಣ ಹೆಗಡೆ ಜೋಜಿನಬೈಲ್‌, ಟಿಎಮ್‌ಎಸ್‌ ನಿರ್ದೇಶಕ ವೆಂಕಟರಮಣ ಭಟ್ಟ ಕಿರುಕುಂಭತ್ತಿ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ ಉಪಸ್ಥಿತರಿದ್ದರು.
​ಗಣಪತಿ ಮಣಸುಮನೆ ಅವರು ರಚಿಸಿದ ಧ್ವೆಯಗೀತೆಯನ್ನು ನರಸಿಂಹ ಭಟ್ಟ ಚಿಕ್ಕಾನಮನೆ ಹಾಡಿದರು. ಡಿ.ಎಸ್. ಭಟ್ಟ ಸ್ವಾಗತಿಸಿದರು. ರಾಮಕೃಷ್ಣ ಕವಡಿಕೇರಿ ನಿರ್ವಹಿಸಿದರು. ಗೋಪಾಲಕೃಷ್ಣ ಗಾಂವ್ಕರ ವಂದಿಸಿದರು.

​ಶಿಬಿರದಲ್ಲಿ 333ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಿಬ್ಬಂದಿ ರಕ್ತ ಸಂಗ್ರಹಿಸಿದರು.

Banner Ad